ಆನ್‌ಲೈನ್‌ನಲ್ಲಿ ಮಗು ದತ್ತು ಸ್ವೀಕಾರ: ಉಡುಪಿಯ ಮಹಿಳೆಗೆ ಲಕ್ಷಾಂತರ ರೂ. ವಂಚನೆ
ಉಡುಪಿ, ನ.9: ಮಗುವನ್ನು ಆನ್‌ಲೈನ್ ಮೂಲಕ ದತ್ತು ನೀಡುವ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ಮೂಳೂರಿನ ದರ್ಗಾ ರಸ್ತೆಯ ಸಿತಾರ್ ಹನೀಫ್ ಎಂಬವರ ಪತ್ನಿ ಹಸೀನಾ (39) ಎಂಬವರು ದತ್ತು ಮಗುವಿಗಾಗಿ ಅ. 20ರಂದು ಮೊಬೈಲ್ ಮೂಲಕ ವೆಬ್ ಸೈಟ್ ನಲ್ಲಿ ಹುಡುಕಾಟ ಮಾಡುತ್ತಿರುವಾಗ ಇಂಗ್ಲೆಂಡ್‌ನಿಂದ ಒಂದು ಹೆಣ್ಣು ಮಗುವನ್ನು ಅಲ್ಲಿನ ಕಾನೂನಿನ ಪ್ರಕಾರ ದತ್ತುಕೊಡುತ್ತಿರುವ ಬಗ್ಗೆ ಮಾಹಿತಿ ದೊರೆಯಿತು. ಅದಕ್ಕೆ ಸಂಬಂಧಿಸಿ ಹಸೀನಾ ತನ್ನ ವಿಳಾಸ, ದೂರವಾಣಿ ವಿವರಗಳನ್ನು ಸಲ್ಲಿಸಿದ್ದರು.
ಬಳಿಕ ಅ. 25ರಂದು 8929595545 ಸಂಖ್ಯೆಯಿಂದ ಬಂದ ಕರೆಯಲ್ಲಿ ಮಗುವಿಗೆ ಬೇಕಾಗುವ ಎಲ್ಲಾ ವಸ್ತುಗಳನ್ನು ಇಂಗ್ಲೆಂಡ್‌ನಿಂದ ಪಾರ್ಸೆಲ್ ಕಳುಹಿಸುವುದಾಗಿ ಹೇಳಲಾಗಿತ್ತು. ಇದನ್ನು ಡೆಲಿವರಿ ನೀಡಬೇಕಾದರೆ 40,000 ರೂ.ವನ್ನು ಪಾವತಿ ಮಾಡಬೇಕು ಎಂಬುದಾಗಿ ತಿಳಿಸಲಾಗಿತ್ತು. ಅದರಂತೆ ಹಸೀನಾ ಅ. 26ರಂದು ಸಿಂಡಿಕೇಟ್ ಬ್ಯಾಂಕ್ ಕಾಪು ಶಾಖೆಯಲ್ಲಿರುವ ತನ್ನ ಖಾತೆಯಿಂದ ಕೃಷ್ಣ ಕುಮಾರ್ ಎಂಬಾತನ ಇಂಡಿಯನ್ ಬ್ಯಾಂಕ್ ಖಾತೆಗೆ 40,000ರೂ. ಜಮಾ ಮಾಡಿದ್ದರು.
ನಂತರ ಆರೋಪಿಗಳಾದ ಗಗನ್ ಗರ್ಗ್, ರಮಣ ಪ್ರೀತ್ ಕೌರ್, ಜಸ್ ಮೀನ್ ಸುಲ್ತಾನ್, ದೊಕೆನೋ ಪಾವ್, ಜಹರುಲ್ ಹಕ್ ಮತ್ತು ಏರೋನ್ ಗಜ್ ಲಿಂಗ್ ಎಂಬವರು ಹಸೀನಾಗೆ ಕರೆ ಮಾಡಿ ಇಂಗ್ಲೆಂಡ್‌ನಿಂದ ಕಳುಹಿಸಿರುವ ಪಾರ್ಸೆಲ್‌ನಲ್ಲಿ ಇಂಗ್ಲೆಂಡಿನ ಪೌಂಡ್ಸ್ ಗಳಿವೆ. ಹಾಗಾಗಿ ಅದನ್ನು ಬಿಡಿಸಿ ಕೊಳ್ಳಲು ಹಣ ಪಾವತಿ ಮಾಡಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಕೇಸು ದಾಖಲಿಸುವುದಾಗಿ ಹೆದರಿಸಿದ್ದರೆಂದು ದೂರಲಾಗಿದೆ.
ಆರೋಪಿಗಳು ದತ್ತು ಮಗುವನ್ನು ಕೊಡದೆ ಮತ್ತು ಪಾರ್ಸೆಲ್ ಕಳುಹಿಸದೆ ಹಸೀನಾರಿಂದ ಒಟ್ಟು 9 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಜಮಾ ಮಾಡಿಸಿ ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.