ಬ್ರಹ್ಮಾವರ: ಕಬ್ಬು ಬೆಳೆಯುವ ರೈತರಿಗೆ ಕಾರ್ಖಾನೆಯಿಂದ ಕಬ್ಬಿನ ಬೀಜ ಪೂರೈಕೆ
ಉಡುಪಿ, ನ.9: ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾರ್ಖಾನೆಗೆ ಸಾಕಷ್ಟು ಕಬ್ಬು ಅಭಿವೃದ್ಧಿ ಪಡಿಸುವಂತೆ ಸೂಚನೆ ನೀಡಿರುವುದರಿಂದ, ಪ್ರಸ್ತುತ ಕಾರ್ಖಾನೆಯ ಕಾರ್ಯ ವ್ಯಾಪ್ತಿಯಲ್ಲಿ ಸುಮಾರು 200 ಎಕ್ರೆ ಪ್ರದೇಶದಲ್ಲಿ ಉತ್ತಮ ತಳಿಯ ಕಬ್ಬಿನ ಬೀಜೋತ್ಪಾದನೆ ಮಾಡಲು ಉದ್ದೇಶಿಸಲಾಗಿದೆ ಎಂದು ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಜಯಶೀಲ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದೆ ಈ 200 ಎಕರೆ ಪ್ರದೇಶದಲ್ಲಿ ಉತ್ಪಾದನೆಯಾಗುವ ಕಬ್ಬಿನ ಬೀಜದಿಂದ 2019ನೇ ನವೆಂಬರ್ ತಿಂಗಳಲ್ಲಿ ಸುಮಾರು 6,000 ಎಕರೆ ಪ್ರದೇಶದಲ್ಲಿ ಕಬ್ಬು ಅಭಿವೃದ್ಧಿ ಪಡಿಸಲಾಗುವುದು. ಕಬ್ಬಿನ ಬೀಜ ನೆಡಲು ಆಸಕ್ತಿ ಇರುವ ರೈತರಿಗೆ ಮಂಡ್ಯ ವಿ.ಸಿ.ಫಾರ್ಮ್‌ನಿಂದ ತರಿಸುವ ಉತ್ತಮ ತಳಿಯ ಕಬ್ಬಿನ ಬೀಜದ ಸಸಿಗಳನ್ನು ಅಥವಾ ಕಬ್ಬಿನ ಬೀಜವನ್ನು ಒಂದು ಎಕರೆಗೆ 5000 ಸಸಿಗಳಂತೆ ಅಥವಾ ಕಬ್ಬಿನ ಬೀಜವನ್ನು ಸರಬರಾಜು ಮಾಡುವುದೆಂದು ಇತೀಚೆಗೆ ಕಾರ್ಖಾನೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ರ್ವಾನು ಮತದಿಂದ ನಿರ್ಣಯಿಸಲಾಗಿದೆ.
ವಾರಾಹಿ ನೀರಾವರಿ ಯೋಜನೆಯ ಕಾಲುವೆ ಪಕ್ಕದಲ್ಲಿ ಜಮೀನು ಹೊಂದಿ ರುವ ರೈತರಿಗೆ ಆಧ್ಯತೆಯಲ್ಲಿ 2 ಎಕರೆಗೆ ಮೀರದಂತೆ ಕಬ್ಬಿನ ಬೀಜದ ಸಸಿಗಳನ್ನು ಅಥವಾ ಕಬ್ಬಿನ ಬೀಜವನ್ನು ಸರಬರಾಜು ಮಾಡಲಾಗುವುದು. ಕಬ್ಬಿನ ಬೀಜ ವಿತರಣೆ ಮಾಡುವ ಕಾರ್ಯಕ್ರಮ ನವೆಂಬರ್ ತಿಂಗಳ ಕೊನೆಯ ವಾರದಿಂದ ಡಿಸೆಂಬರ್ ಕೊನೆುವರೆಗೆ ಹಮ್ಮಿಕೊಳ್ಳಲಾಗುವುದು.
ಆದ್ದರಿಂದ ಕಬ್ಬು ಬೆಳೆಯಲು ಆಸಕ್ತಿ ಹೊಂದಿರುವ ರೈತರು, ತಾವು ಎಷ್ಟು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುವಿರಿ ಎಂಬ ಬಗ್ಗೆ ಕೂಡಲೇ ಅಂಚೆ ಕಾರ್ಡ್ ಮೂಲಕ ಕಾರ್ಖಾನೆಗೆ ಪತ್ರ ಬರೆದು ತಿಳಿಸುವಂತೆ ಅಧ್ಯಕ್ಷ ಎಚ್. ಜಯಶೀಲ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.