ನೋಟು ನಿಷೇಧ ನಿರ್ಧಾರಕ್ಕಾಗಿ ಬಿಜೆಪಿ ಕ್ಷಮೆ ಯಾಚಿಸಬೇಕು: ಮಾಯಾವತಿ ಆಗ್ರಹ

Update: 2018-11-09 14:23 GMT

ಲಕ್ನೋ,ನ.9: ನೋಟು ನಿಷೇಧ ನಿರ್ಣಯಕ್ಕಾಗಿ ಬಿಜೆಪಿಯು ಕ್ಷಮೆ ಯಾಚಿಸಬೇಕು ಎಂದು ಶುಕ್ರವಾರ ಇಲ್ಲಿ ಆಗ್ರಹಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು,ಈ ಕ್ರಮವು ತನ್ನ ಯಾವುದೇ ಉದ್ದೇಶಗಳನ್ನು ಸಾಧಿಸಿಲ್ಲ ಮತ್ತು ಜನರ ಸಮಸ್ಯೆಗಳನ್ನು ಹೆಚ್ಚಿಸಿದೆಯಷ್ಟೇ ಎಂದು ಹೇಳಿದರು.

ವಿದೇಶಗಳಲ್ಲಿಯ ಕಪ್ಪುಹಣವನ್ನು ಮರಳಿ ತರುವ ಮತ್ತು ‘ಅಚ್ಛೇ ದಿನ್’ಗಳ ಬಿಜೆಪಿ ಭರವಸೆಗಳ ಪೊಳ್ಳುತನ ಬಯಲಾಗಿದೆ ಮತ್ತು ಇದರಿಂದಾಗಿ ಜನರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎಂದ ಅವರು,ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವು ವೈಫಲ್ಯಗಳ ಸರಕಾರ ಎಂದು ನೆನಪಿನಲ್ಲುಳಿಯಲಿದೆ. ಅದು ಜನರಿಗೆ ನೀಡಿದ್ದ ಯಾವುದೇ ಭರವಸೆಗಳು ಈಡೇರಿಲ್ಲ ಎಂದರು.

ನೋಟು ನಿಷೇಧದ ರೂಪದಲ್ಲಿ ಹೇರಲಾಗಿದ್ದ ‘ಆರ್ಥಿಕ ತುರ್ತುಸ್ಥಿತಿ’ಯಿಂದ ಯಾವುದೇ ಸಾಧನೆಯಾಗಿಲ್ಲ. ಜನರ ಸಮಸ್ಯೆಗಳನ್ನು ಹೆಚ್ಚಿಸಿದ್ದಷ್ಟೇ ಅದರ ಸಾಧನೆ. ನೋಟು ನಿಷೇಧವು ಬಡವರ ಬೆನ್ನುಮೂಳೆಯನ್ನು ಮುರಿದಿದೆ ಮತ್ತು ಬಿಜೆಪಿಯವರು ತಮ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳಲು ನೆರವಾಯಿತು ಎಂದು ಮಾಯಾವತಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News