×
Ad

ಕಾರಾಗೃಹಗಳಲ್ಲಿ ಕೈದಿಗಳ ಮನ ಪರಿವರ್ತನೆಯಾಗಬೇಕು: ಜಿಲ್ಲಾ ನ್ಯಾಯಾಧೀಶರು

Update: 2018-11-09 19:56 IST

ಉಡುಪಿ, ನ.9: ಕಾರಾಗೃಹದಲ್ಲಿರುವ ಖೈದಿಗಳು ತಮ್ಮ ವಿಚಾರಣಾಧೀನ ಅಥವಾ ಶಿಕ್ಷೆಯ ಅವಧಿಯಲ್ಲಿ ತಾವು ತಪ್ಪು ಮಾಡಿರುವ ಕುರಿತು ಚಿಂತಿಸಿ ಮನಪರಿವರ್ತನೆ ಮಾಡಿಕೊಂಡು, ಬಿಡುಗಡೆಯ ನಂತರ ಹೊಸ ವ್ಯಕ್ತಿತ್ವದೊಂದಿಗೆ ಸಮಾಜಕ್ಕೆ ಮರಳಬೇಕು ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ವೆಂಕಟೇಶ ನಾಯ್ಕಾ ಟಿ. ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕಾರಾಗೃಹಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ -2018ನ್ನು ಹಿರಿಯಡ್ಕ ಸಮೀಪದ ಅಂಜಾರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕಾರಾಗೃಹಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ -2018ನ್ನು ಹಿರಿಯಡ್ಕ ಸಮೀಪದ ಅಂಜಾರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಯಾವುದೋ ಅನಿರೀಕ್ಷಿತ ಸಂದರ್ಭದಲ್ಲಿ ಕೋಪದಿಂದ ಕಾನೂನು ಉಲ್ಲಂಘಿಸಿ ಕಾರಾಗೃಹಕ್ಕೆ ಬಂದಿರುತ್ತೀರಿ. ನಿಮಗೆ ಶಿಕ್ಷೆ ಆಗುವವರೆಗೂ ವಿಚಾರಣಾಧೀನ ಖೈದಿಗಳಾಗಿರುತ್ತೀರಿ. ನ್ಯಾಯಾಲಯದ ವಿಚಾರಣೆ ನಂತರ ಅಪರಾಧ ಸಾಬೀತಾದರೆ ಶಿಕ್ಷೆಗೆ ಒಳಗಾಗುತ್ತೀರಿ. ಇಲ್ಲವಾದರೆ ಬಿಡುಗಡೆ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಮತ್ತೆ ಮರುಳುತ್ತೀರಿ ಎಂದವರು ತಿಳಿಸಿದರು.

ಕಾರಾಗೃಹದಲ್ಲಿ ಇರುವಷ್ಟು ದಿನ ಉತ್ತಮ ಚಿಂತನೆಗಳಿಂದ ಮನಪರಿರ್ವನೆ ಹೊಂದಿ, ಉತ್ತಮ ನಡವಳಿಕೆ ರೂಢಿಸಿಕೊಳ್ಳಿ. ಪ್ರತಿದಿನ ಯೋಗಾಭ್ಯಾಸದಂತಹ ಉತ್ತಮ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಕಾರಾಗೃಹದಲ್ಲಿ ಸಹ ಜಿಲ್ಲಾ ಕಾರಾಗೃಹ ಅಧೀಕ್ಷಕರು ನಿಮ್ಮ ನಡವಳಿಕೆಯ ಬಗ್ಗೆ ದಾಖಲೆ ಇಡುತ್ತಾರೆ. ನಿಮ್ಮ ನಡವಳಿಕೆ ಉತ್ತಮವಾಗಿದ್ದರೆ, ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಈ ದಾಖಲೆ ನಿಮಗೆ ನೆರವಾಗಲಿದೆ. ಯಾವುದೇ ಸಮಸ್ಯೆಗಳಿದ್ದರೆ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದು ನೆರವು ಪಡೆಯಿರಿ ಎಂದು ಜಿಲ್ಲಾ ನ್ಯಾಯಾಧೀಶ ರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಯಾವುದೋ ಒತ್ತಡದಿಂದ ತಿಳುವಳಿಕೆ ಇಲ್ಲದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಖೈದಿಗಳಾಗಿರುತ್ತೀರಿ. ಕಾರಾಗೃಹದಲ್ಲಿ ನಿಮ್ಮ ಜೀವನ ಶೈಲಿ, ವ್ಯಕ್ತಿತ್ವ ಬದಲಿಸಿಕೊಳ್ಳಿ. ಶಿಸುತಿ ರೂಢಿಸಿಕೊಳ್ಳಿ. ಓದುವ ಹವ್ಯಾಸ ಬೆಳೆಸಿಕೊಳ್ಳಿ. ನೀವು ಅಪರಾಧದಿಂದ ಮುಕ್ತರಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದಾಗ ನಿಮ್ಮ ಉತ್ತಮ ನಡವಳಿಕೆ ಹೊಸ ಜೀವನ ಪ್ರಾರಂಭಿಸಲು ನೆರವಾಗಲಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿ ಕೆಎಂಸಿ ಮಣಿಪಾಲದ ಚರ್ಮಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರೊ.ಡಾ.ಸತೀಶ್ ಪೈ ಕಾರಾಗೃಹ ವಾಸಿಗಳ ಚರ್ಮ ಪರೀಕ್ಷೆ ನಡೆಸಿ ದರು. ಕೆಎಂಸಿ ಮನೋರೋಗ ವಿಭಾಗದ ಪ್ರೊ.ಡಾ.ಪಿ.ಎಸ್.ವಿ.ಎನ್. ಶರ್ಮಾ ಉಪನ್ಯಾಸ ನೀಡಿದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಂಜಯ ಜತ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News