ನ.10 - 11ರಂದು ಮತದಾರರ ಮಿಂಚಿನ ನೊಂದಣಿ
ಉಡುಪಿ, ನ.9: 2019ರ ಜ.1ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ನ.10ರಿಂದ ಡಿ.20ರವರೆಗೆ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ.
ಇದರ ಅಂಗವಾಗಿ ನ.10 ಮತ್ತು 11ರಂದು ಮಿಂಚಿನ ನೋಂದಣಿ ಎಂಬ ಕಾರ್ಯಕ್ರಮವನ್ನು ಆಯೋಜಿಸಿ, ಈ ಸಂದರ್ಭದಲ್ಲಿ ಮತಗಟ್ಟೆ ಮಟ್ಟದಲ್ಲಿ (ಬಿಎಲ್‌ಓ) ಸಾರ್ವಜನಿಕರಿಂದ ನಮೂನೆ 6,7,8,8ಎ ಅರ್ಜಿಗಳನ್ನು ಸಂಗ್ರಹಿಸಲಾಗುವುದು. ಆದ್ದರಿಂದ ಈ ಮಿಂಚಿನ ನೊಂದಣಿಯಲ್ಲಿ ಮತದಾರರು, ಮತದಾರರ ಪಟ್ಟಿಯಲ್ಲಿರುವ ಹೆಸರು ದೃಢಪಡಿಸಿಕೊಳ್ಳುವಂತೆ ಹಾಗೂ ದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಮತ್ತು 1-1-2019ಕ್ಕೆ 18 ವರ್ಷ ಪೂರ್ಣಗೊಳ್ಳಲಿರುವ ಎಲ್ಲಾ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅವಕಾಶವಿದ್ದು, ಸಮೀಪದ ಬಿಎಲ್‌ಓಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಈ ಕಾರ್ಯಕ್ರಮದ ದಿನಗಳಂದು ಮತಗಟ್ಟೆ ಮಟ್ಟದ ಅಧಿಕಾರಿಗಳು ಬೆಳಗ್ಗೆ 9 ರಿಂದ ಸಂಜೆ 5:30ರವರೆಗೆ ಅವರ ಮತಗಟ್ಟೆಯಲ್ಲಿರುವ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.