ಕೇಂದ್ರದ ನಿಲುವು ದುರದೃಷ್ಟಕರ : ದೇವಿಪ್ರಸಾದ್ ಶೆಟ್ಟಿ.

Update: 2018-11-09 14:31 GMT

ಪಡುಬಿದ್ರಿ, ನ. 9: ಕಾಪು ತಾಲ್ಲೂಕಿನ ಪಾದೂರು ಬಳಿ ನಿರ್ಮಿಸಲಾಗಿರುವ ಕೇಂದ್ರ ಸರ್ಕಾರ ಸಾಮ್ಯದ ಪಾದೂರು ಕಚ್ಚಾ ತೈಲ ಶೇಖರಣಾ ಘಟಕ ದೇಶದ ರಕ್ಷಣೆಗಾಗಿ ಎಂದು ಬಿಂಬಿಸಿ ಇದೀಗ ಖಾಸಗಿ ಸಂಸ್ಥೆಯವರಿಗೆ ವ್ಯವಹಾರಿಕ ಉದ್ದೇಶಗಳಿಗೆ ನೀಡುವ ಕೇಂದ್ರ ಸರ್ಕಾರದ ಪಿ.ಪಿ.ಪಿ ನೀತಿ ಜನ ವಿರೋಧಿ ನಿಲುವೆಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಪಾದೂರು ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಬಾಧಕವಾಗಿ ಕಚ್ಚಾ ತೈಲ ಶೇಖರಣಾ ಘಟಕ ಹಾಗೂ ಇದಕ್ಕೆ ಪೂರಕವಾದ ತೋಕೂರಿನಿಂದ ಪಾದೂರಿ ನವರೆಗೆ 24 ಗ್ರಾಮಗಳಲ್ಲಿ ಹಾದು ಹೋಗುವ ಪೈಪ್‍ಲೈನ್ ಮತ್ತು ಹೈಟೆನ್ಶನ್ ವಿದ್ಯುತ್ ಸರಬರಾಜು ಯೋಜನೆಗಳು, ಭೀಕರ ಬಂಡೆ ಸ್ಫೋಟದಿಂದ ಜನರಿಗಾದ ತೊಂದರೆಗಳನ್ನೆಲ್ಲಾ ಸಹಿಸಿ ಇಲ್ಲಿಯ ಗ್ರಾಮಸ್ಥರು ದೇಶದ ಹಿತಕ್ಕಾಗಿ ಎಂಬ ಉದ್ದೇಶದಿಂದ ಅತ್ಯಂತ ಕಡಿಮೆ ಮೌಲ್ಯಕ್ಕೆ ರೈತರು ಸಹಮತ ದಿಂದ ಭೂಮಿ ನೀಡಿರುತ್ತಾರೆ. ಆದರೆ ಇದೀಗ ಇದರ ಉದ್ದೇಶವನ್ನು ಬದಲಿಸಿ ಬೃಹತ್ ಕೈಗಾರಿಕೋದ್ಯಮಿಗಳಿಗೆ ಸಹಕಾರ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದು ದುರದೃಷ್ಟಕರವೆಂದು ಶೆಟ್ಟಿ ತಿಳಿಸಿದ್ದಾರೆ.

ಅಂದು ದೇಶ ರಕ್ಷಣೆಯ ಮಾತಿನೊಂದಿಗೆ ಯೋಜನೆ ತಳವೂರಿದ್ದು, ಯುದ್ಧ ಸಂದರ್ಭದಲ್ಲಿ ಹಾಗೂ ತೈಲ ಮಾರುಕಟ್ಟೆಯಲ್ಲಿ ಅಭಾವ ಉಂಟಾದಾಗ ಸರಿದೂಗಿಸುವ ಕಾರ್ಯತಂತ್ರವೆಂದು ಬಿಂಬಿಸಲಾಗಿತ್ತು.  ಇದೀಗ ಅಂಬಾನಿಯಂತಹ ಉದ್ದಿಮೆದಾರರಿಗೆ ಸಹಕರಿಸುವ ಉದ್ದೇಶದಿಂದ ವಿಶ್ವ ಮಾರುಕಟ್ಟೆ ಯಲ್ಲಿ  ಬೆಲೆ ಕಡಿಮೆ ಇದ್ದಾಗ ಖರೀದಿಸಿ ಶೇಖರಿಸಿ ಹೆಚ್ಚು ಬೆಲೆಗೆ ಮಾರುಕಟ್ಟೆಗೆ ವಿತರಿಸುವ ಯೋಜನೆ ಇದಾಗಿದೆ. ಇದನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ನಡೆಸುವುದರಿಂದ ಮುಂದೆ ಭಾರೀ ಅನಾಹುತಗಳಿಗೆ ಅವಕಾಶವಾಗಬಹುದಲ್ಲದೆ ಸುತ್ತ ಮುತ್ತಲಿನ ಜನರ ರಕ್ಷಣೆಗೆ ತೊಡಕಾಗುವ ಭೀತಿ ಇದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News