ಗೋವಾಕ್ಕೆ ಮೀನು ಆಮದು ನಿಷೇಧ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಆಗ್ರಹ
ಉಡುಪಿ, ನ.9: ಕರ್ನಾಟಕ ಕರಾವಳಿ ಸಹಿತ ವಿವಿಧ ರಾಜ್ಯಗಳ ಮೀನು ಆಮದನ್ನು ನಿಷೇಧಿಸಿರುವ ಗೋವಾ, ಕೂಡಲೇ ಈ ನಿಷೇಧವನ್ನು ಹಿಂಪಡೆಯ ಬೇಕೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಕರ್ನಾಟಕದ ಮೀನುಗಳ ಅಮದನ್ನು ಗೋವಾದ ಕೆಲವುಮೀನು ವ್ಯಾಪಾರಸ್ಥರು ರಾಸಾಯನಿಕ ಬಳಕೆಯ ಕಾರಣ ನೀಡಿ ನಿಷೇಧಿಸಿದ್ದು, ಇದರಿಂದಾಗಿ ಕರಾವಳಿ ಕರ್ನಾಟಕದ ಮೀನುಗಾರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ಈಗಾಗಲೇ ಮೀನಿಗೆ ಫಾರ್ಮಲಿನ್ ಸಿಂಪಡಣೆಯ ಬಗ್ಗೆ ಹಲವು ಬಾರಿ ಸರಕಾರದ ಅಧಿಕೃತ ಲ್ಯಾಬ್‌ಗಳಲ್ಲಿ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಿದಾಗ ಯಾವುದೇ ರೀತಿಯ ರಾಸಾಯನಿಕ ಪತ್ತೆಯಾಗಿಲ್ಲ ಹಾಗೂ ಮೀನು ಸೇವನೆಗೆ ಯೋಗ್ಯವಾಗಿದ್ದು ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ಆಹಾರ ಇಲಾಖೆಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದು ಯಶ್‌ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿ ಭಾಗದ ಮೀನುಗಾರರು ಕಳೆದ ಹಲವು ದಶಕಗಳಿಂದ ಪ್ರಾಮಾಣಿಕ ವ್ಯವಹಾರವನ್ನು ಗೋವಾ ಸಹಿತ ದೇಶದ ವಿವಿಧ ರಾಜ್ಯಗಳೊಂದಿಗೆ ನಡೆಸುತ್ತಿದ್ದು, ಈವರೆಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ನಡೆಯುತ್ತಿದ್ದ ವ್ಯವಹಾರ ಇದೀಗ ಗೋವಾ ರಾಜ್ಯದ ಕೆಲವು ಮೀನು ಮಾರಾಟಗಾರರ ಸ್ವಾರ್ಥಕ್ಕಾಗಿ ಮೀನು ಆಮದು ನಿಷೇಧ ನೀತಿಯನ್ನು ಮುಂದುವರಿಸಲು ಒತ್ತಡ ಹೇರಿದೆ ಎಂದವರು ದೂರಿದ್ದಾರೆ.
ಈ ನಿಷೇಧದಿಂದಾಗಿ ಕರಾವಳಿ ಭಾಗದ ಮತ್ಸೋದ್ಯಮದ ಕೋಟ್ಯಾಂತರ ರೂ. ವ್ಯಾಪಾರ ವಹಿವಾಟು ಸ್ತಬ್ಧವಾಗಿದ್ದು, ಈಗಾಗಲೇ ಮತ್ಸ್ಯಕ್ಷಾಮ, ಇಂಧನದ ಬೆಲೆ ಏರಿಕೆ ಹಾಗೂ ವಿವಿಧ ಸಮಸ್ಯೆಗಳಿಂದ ಕಂಗೆಟ್ಟಿರುವ ಮೀನುಗಾರರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದಿದ್ದಾರೆ.
ಕರಾವಳಿಯ ಮೀನುಗಾರರ ಈ ಸಂಕಷ್ಟವನ್ನು ಮನಗಂಡು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.