×
Ad

ನೆತ್ತರೆಕೆರೆಯ ನೈಜ ಇತಿಹಾಸದ ಬಗ್ಗೆ ಸರಕಾರ ಸತ್ಯಶೋಧನೆ ನಡೆಸಲಿ: ಸಂಸದ ನಳಿನ್

Update: 2018-11-09 20:35 IST

ಬಂಟ್ವಾಳ, ನ. 9: ಸುಮಾರು 300 ವರ್ಷಗಳ ಹಿಂದೆ ಮತಾಂಧ ಟಿಪ್ಪು ಸುಲ್ತಾನ್ ಒಟ್ಟು 700ಕ್ಕೂ ಮಿಕ್ಕಿ ಮಂದಿ ಅಮಾಯಕ ಕ್ರೈಸ್ತರ ರುಂಡ ಕತ್ತರಿಸಿ ಇಲ್ಲಿನ ಪುದು ಗ್ರಾಮದ ನೆತ್ತರೆಕೆರೆಗೆ ಎಸೆದಿರುವ ಹಿನ್ನೆಲೆ ಬಗ್ಗೆ ಮಂಗಳೂರು ದರ್ಶನ ಮತ್ತಿತರ ಐತಿಹಾಸಿಕ ಗ್ರಂಥಗಳಲ್ಲಿ ದಾಖಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಇಲ್ಲಿನ ಪುದು ಗ್ರಾಮದ ನೆತ್ತರಕೆರೆ ಬಳಿ ಕ್ಷೇತ್ರ ಬಿಜೆಪಿ ಸಮಿತಿ ವತಿಯಿಂದ ಶುಕ್ರವಾರ ಸಂಜೆ ನಡೆದ "ತಿರುಚಿದ ಇತಿಹಾಸದ ಸತ್ಯಶೋಧನಾ ಅವಲೋಕನ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಲಾಜಿಗೆ ಬಿದ್ದು ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವ ಹಾಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕೂಡಲೇ ಅಧಿಕಾರಿಗಳನ್ನು ನೇಮಿಸುವ ಮೂಲಕ ಇಲ್ಲಿನ ನೈಜ ಇತಿಹಾಸದ ಬಗ್ಗೆ ಸತ್ಯಶೋಧನೆ ನಡೆಸಬೇಕು ಎಂದು ಸಂಸದ ನಳಿನ್ ಆಗ್ರಹಿಸಿದರು.

ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತನಾಡಿ, ಕಳೆದ 17ನೆ ಶತಮಾನದಲ್ಲಿ ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ನಡೆಸಿದ್ದ ಹತ್ಯಾಕಾಂಡ, ಅತ್ಯಾಚಾರ, ಮತಾಂತರ ಮತ್ತಿತರ ಕೃತ್ಯವನ್ನು ಜನತೆಗೆ ಮತ್ತೆ ನೆನಪಿಸಲು ಕಳೆದ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆಗೆ ತಂದಿದೆ ಎಂದರು.  

ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯ್ಲಸ್ ಡಿಸೋಜ, ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಮತ್ತಿತರರು ಮಾತಪ್ರಮುಖರಾದ ಜಿ.ಆನಂದ, ಕ್ಯಾ.ಬ್ರೀಜೇಶ್ ಚೌಟ, ಎ.ಗೋವಿಂದ ಪ್ರಭು, ರವೀಂದ್ರ ಕಂಬಳಿ, ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರಮನಾಥ ರಾಯಿ, ಸೀತಾರಾಮ ಪೂಜಾರಿ,  ಪ್ರವೀಣ್ ತುಂಬೆ, ದಿನೇಶ ಶೆಟ್ಟಿ ಕೊಟ್ಟಿಂಜ, ದಾಮೋದರ ನೆತ್ತೆರೆಕೆರೆ, ದಯಾನಂದ ಜಾರಂದಗುಡ್ಡೆ, ರಂಜಿತ್ ಮೈರ, ಸುರೇಶ್ ಕೋಟ್ಯಾನ್, ಪುರುಷೋತ್ತಮ ವಾಮದಪದವು ಉಪಸ್ಥಿತರಿದ್ದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿ, ವಂದಿಸಿದರು. 

ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ. ನೇತೃತ್ವದ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News