ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಭ್ರಷ್ಟಾಚಾರ ನಡೆದಿಲ್ಲ: ಪಪಂ ಅಧ್ಯಕ್ಷ ಸ್ಪಷ್ಟನೆ
ಬಂಟ್ವಾಳ, ನ. 9: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಯಾವುದೇ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಬಿಜೆಪಿಯ 12 ಮಂದಿ ಸದಸ್ಯರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಯಾರೂ ಭ್ರಷ್ಟಾಚಾರ ಮಾಡಿಲ್ಲ. ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ವಿಟ್ಲ ಪಪಂ ಅಧ್ಯಕ್ಷ ಅರುಣ್ ಎಂ.ವಿಟ್ಲ ಸ್ಪಷ್ಟಪಡಿಸಿದ್ದಾರೆ.
ಅವರು ಶುಕ್ರವಾರ ವಿಟ್ಲ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಡ್ಡದಬೀದಿ ರಸ್ತೆ ಬದಿಯ ಚರಂಡಿ ಕಾಮಗಾರಿ ಪಪಂನಿಂದ ಕೈಗೆತ್ತಿಕೊಳ್ಳಲಾ ಗಿದೆ ಹೊರತು, ಅವರು ಹೇಳಿದಂತೆ ನಗರೋತ್ಥಾನ ಅನುದಾನದಿಂದಲ್ಲ. ಆ ಕಾಮಗಾರಿ ಕಳಪೆಯಾಗಿಲ್ಲ. ಎಂಸ್ಯಾಂಡ್ ಬಳಸಲು ಸರಕಾರ ಮಾನ್ಯತೆ ನೀಡಿದೆ. ಮತ್ತೆ ಇವರ ಆರೋಪಕ್ಕೆ ಬೆಲೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಮೇಗಿನಪೇಟೆ ಜನತೆಯಿಂದ ಹಣ ಸಂಗ್ರಹಿಸಿ, ಯಾವ ಕಾಮಗಾರಿಯನ್ನೂ ಮಾಡದೇ ಅಲ್ಲಿಯ ಜನತೆಗೆ ಕುಡಿಯುವ ನೀರಿನ ಸೌಲಭ್ಯವನ್ನೂ ಒದಗಿಸದೇ ವಂಚಿಸಿದವರು ಯಾರು? ಎಂಬ ಸತ್ಯ ಮೇಗಿನಪೇಟೆ ವಾರ್ಡಿನ ಜನತೆಗೆ ಚೆನ್ನಾಗಿ ತಿಳಿದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಪಂ ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ವಿ.ರಾಮದಾಸ ಶೆಣೈ, ಲೋಕನಾಥ ಶೆಟ್ಟಿ ಕೊಲ್ಯ, ಶ್ರೀಕೃಷ್ಣ ವಿಟ್ಲ ಉಪಸ್ಥಿತರಿದ್ದರು.