×
Ad

ಲಂಚ ಆರೋಪ; ಸಿವಿಸಿ ಮುಂದೆ ಹಾಜರಾದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ

Update: 2018-11-09 21:14 IST

ಹೊಸದಿಲ್ಲಿ, ನ. 9: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಶುಕ್ರವಾರ ಕೇಂದ್ರ ವಿಚಕ್ಷಣಾ ಆಯುಕ್ತ ಕೆ.ವಿ. ಚೌಧರಿ ನೇತೃತ್ವದ ಸಮಿತಿ ಮುಂದೆ ಎರಡನೇ ದಿನವಾದ ಶುಕ್ರವಾರ ಕೂಡ ಹಾಜರಾಗಿದ್ದಾರೆ ಹಾಗೂ ಸಿಬಿಐಯ ಉಪ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರು ಮಾಡಿದ ಲಂಚ ಆರೋಪವನ್ನು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ತಾನ ಅವರ ಎಲ್ಲ ಆರೋಪಗಳನ್ನು ವರ್ಮಾ ಅವರು ವಿಚಕ್ಷಣಾ ಆಯುಕ್ತರಾದ ಟಿ.ಎಂ. ಬಾಸಿನ್ ಹಾಗೂ ಶರದ್ ಕುಮಾರ್ ಸಮಿತಿಯ ಮುಂದೆ ನಿರಾಕರಿಸಿದ್ದಾರೆ. ಕೇಂದ್ರ ವಿಚಕ್ಷಣಾ ಆಯೋಗದ ವಿಚಾರಣೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ನಿಯೋಜಿಸಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಕೂಡ ಈ ಸಂದರ್ಭ ಹಾಜರಿದ್ದರು. ಶುಕ್ರವಾರ ಬೆಳಗ್ಗೆ ಕೇಂದ್ರ ವಿಚಕ್ಷಣಾ ಆಯೋಗದ ಕಚೇರಿಗೆ ಬಂದ ವರ್ಮಾ ಅವರು ಗಂಟೆಗಳ ಕಾಲ ಅಲ್ಲಿದ್ದರು. ಕೇಂದ್ರ ವಿಚಕ್ಷಣ ಆಯೋಗದ ಎದುರು ಕಾಯುತ್ತಿದ್ದ ಮಾಧ್ಯಮದವರೊಂದಿಗೆ ಅವರು ಮಾತನಾಡಲಿಲ್ಲ.

ವರ್ಮಾ ವಿರುದ್ಧ ಅಸ್ತಾನ ಅವರ ಆರೋಪದ ಬಗೆಗಿನ ವಿಚಾರಣೆಯನ್ನು ಎರಡು ವಾರಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಅಕ್ಟೋಬರ್ 26ರಂದು ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಸೂಚಿಸಿತ್ತು. ಎರಡು ವಾರಗಳ ಕಾಲಾವಧಿ ಶುಕ್ರವಾರ ಅಂತ್ಯಗೊಂಡಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಸೋಮವಾರ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News