ಕೇರಳದ ಶಾಸಕನನ್ನು ಅನರ್ಹಗೊಳಿಸಿದ ಹೈಕೋರ್ಟ್

Update: 2018-11-09 17:16 GMT

ಕೊಚ್ಚಿ,ನ.9: 2016ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಧರ್ಮವನ್ನು ಬಳಸಿಕೊಂಡಿದ್ದರೆಂಬ ಆರೋಪದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಇಎಂಎಲ್)ನ ಶಾಸಕ ಕೆ.ಎಂ.ಶಾಜಿ ಅವರನ್ನು ಕೇರಳ ಉಚ್ಚ ನ್ಯಾಯಾಲಯವು ಶುಕ್ರವಾರ ಸದಸ್ಯತ್ವದಿಂದ ಅನರ್ಹಗೊಳಿಸಿದೆ. ಇದೇ ವೇಳೆ ಅವರು ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ತನ್ನ ಆದೇಶಕ್ಕೆ ಎರಡು ವಾರಗಳ ತಡೆಯಾಜ್ಞೆಯನ್ನೂ ಅದು ನೀಡಿದೆ.

ಅಝಿಕೋಡ್ ಕ್ಷೇತ್ರದ ಶಾಸಕರಾಗಿರುವ ಶಾಜಿ ಅವರು ಚುನಾವಣಾ ಪ್ರಚಾರದ ವೇಳೆ ಧರ್ಮದ ಆಧಾರದಲ್ಲಿ ಮತಗಳನ್ನು ಕೋರಿದ್ದರು ಎಂದು ಆರೋಪಿಸಿ ಅವರ ವಿರುದ್ಧ ಸ್ಪರ್ಧಿಸಿದ್ದ ಎಲ್‌ಡಿಎಫ್ ಅಭ್ಯರ್ಥಿ ಎಂ.ವಿ.ನಿಕೇಶ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತ್ತು. ಶುಕ್ರವಾರ ಬೆಳಿಗ್ಗೆ ತೀರ್ಪು ಪ್ರಕಟಿಸಿದ ನ್ಯಾ.ಪಿ.ಡಿ.ರಾಜನ್ ಅವರು ಶಾಜಿಯವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೇರಳ ವಿಧಾನಸಭಾ ಸ್ಪೀಕರ್ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿದ್ದರು.

ಐಯುಎಂಎಲ್ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಪಾಲುದಾರನಾಗಿದೆ.

ಶಾಜಿ ಚುನಾವಣೆಯಲ್ಲಿ ಗೆಲ್ಲಲು ಜನತಾ ಪ್ರಾತಿನಿಧ್ಯ ಕಾಯ್ದೆಯ ವಿವಿಧ ಕಲಮ್‌ಗಳಡಿ ಹೇಳಲಾಗಿರುವ ನಿಯಮಗಳನ್ನು ಉಲ್ಲಂಘಿಸಿದ್ದರು. ತಾನು ಮುಸ್ಲಿಂ ಆಗಿರುವದರಿಂದ ತನಗೇ ಮತಗಳನ್ನು ನೀಡುವಂತೆ ಅವರು ಮತ್ತು ಅವರ ಏಜೆಂಟರು ಮುಸ್ಲಿಂ ಸಮುದಾಯವನ್ನು ಕೋರಿಕೊಂಡಿದ್ದರು. ಅಲ್ಲದೆ ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿಲ್ಲದ ಅಭ್ಯರ್ಥಿಗೆ ಮತ ನೀಡದಂತೆ ಆಗ್ರಹಿಸಿ ಅವರು ಕರಪತ್ರಗಳನ್ನೂ ಹೊರಡಿಸಿದ್ದರು ಎಂದು ಕುಮಾರ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.

ತೀರ್ಪಿನ ಪ್ರತಿ ಕೈಸೇರಿದ ಬಳಿಕ ಮೇಲ್ಮನವಿಯನ್ನು ಸಲ್ಲಿಸುವ ಬಗ್ಗೆ ತಾನು ನಿರ್ಧರಿಸುವುದಾಗಿ ಐಯುಎಂಎಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News