ಎಂಆರ್‌ಪಿಎಲ್-ಎಂಎಸ್‌ಇಝಡ್ ಯೋಜನೆಗಳೇ ಕಾನೂನು ಬಾಹಿರ: ಡಾ. ರವೀಂದ್ರನಾಥ ಶ್ಯಾನ್ ಬಾಗ್
ಮಂಗಳೂರು, ನ.10: ಎಂಆರ್‌ಪಿಎಲ್-ಎಂಎಸ್‌ಇಝಡ್ ಯೋಜನೆಗಳೇ ಕಾನೂನು ಬಾಹಿರ ಮತ್ತು ರಾಷ್ಟ್ರೀಯ ನೀತಿಗೆ ವಿರೋಧವಾಗಿದೆ ಎಂಬುದನ್ನು 2016ರಲ್ಲಿ ಸಿಎಜಿ ವೆಬ್‌ಸೈಟ್‌ನ 39ನೆ ವರದಿಯಲ್ಲಿ ಪ್ರಕಟಿಸಲಾಗಿದೆ. ಆ ಮೂಲಕ ಪ್ರತಿಷ್ಠಾನವು ಈವರೆಗೆ ನಡೆಸಿದ ಅಧ್ಯಯನ ಅಂಶಗಳಿಗೂ ಬಲವಾದ ರುಜುವಾತು ಸಿಕ್ಕಂತಾಗಿದೆ ಎಂದು ಉಡುಪಿಯ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫೌಂಡೇಶನ್‌ನ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನ್ ಬಾಗ್ ಹೇಳಿದರು.
ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆ ಮತ್ತು ಕೃಷಿ ಭೂಮಿ ಸಂರಕ್ಷಣಾ ಸಮಿತಿಯು ನಗರದ ಕೋಡಿಯಾಲ್‌ಬೈಲ್‌ನ ಸಿಬಿಒಒ ಕೇಂದ್ರದ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಎಂಆರ್‌ಪಿಎಲ್-ಎಂಎಸ್‌ಇಝಡ್ ಕಂಪೆನಿಗಳ ವಿರುದ್ಧದ ತನಿಖಾ ವರದಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಂಆರ್‌ಪಿಎಲ್-ಎಂಎಸ್‌ಇಝಡ್ ಕಂಪೆನಿಗಳು ಸಾಮಾಜಿಕ ಪರಿಣಾಮ ಮಾಪನ ವರದಿ ಮತ್ತು ಪುನರ್ವಸತಿ ಕ್ರಿಯಾ ಯೋಜನೆಗೆ ತಗಲಿದ ಆಯವ್ಯಯ ಪಟ್ಟಿಯನ್ನೂ ತಯಾರಿಸಲೇ ಇಲ್ಲ ಎಂದು ಈ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲದೆ ತಕ್ಷಣ ತಯಾರಿಸಬೇಕೂ ಎಂದು ಸಿಎಜಿ ಸೂಚಿಸಿದೆ. ಇದಕ್ಕೆ ಪರಿಸರ ಮಂತ್ರಾಲಯವೂ ಸಮ್ಮತಿ ಸೂಚಿಸಿದೆ. ಆದರೆ, ಮುಂದಿನ ಕ್ರಮ ಆಶಾದಾಯಕವಾಗಿಲ್ಲ. ದೇಶದಲ್ಲಿ ಸಾಕಷ್ಟು ಕಾಯ್ದೆಗಳು, ಅಧಿಸೂಚನೆ, ರಾಷ್ಟ್ರೀಯ ನೀತಿ ಎಲ್ಲವೂ ಇದೆ. ಆದರೆ, ಅನುಷ್ಠಾನ ಮಾತ್ರ ಆಗುತ್ತಿಲ್ಲ. ಅಧಿಕಾರಿಗಳು ಜವಾಬ್ದಾರಿಯನ್ನು ನಿಭಾಯಿಸದೆ ನುಣುಚಿಕೊಳ್ಳುತ್ತಿದ್ದಾರೆ ಎಂದು ಡಾ. ರವೀಂದ್ರನಾಥ ಶ್ಯಾನ್ ಬಾಗ್ ತಿಳಿಸಿದರು.
ರೈತರ ಜಮೀನು ವಶಪಡಿಸಿಕೊಳ್ಳುವ ಮುನ್ನ ಸಾಮಾಜಿಕ ಪರಿಣಾಮ ಮಾಪನಾ ವರದಿ ತಯಾರಿಸಬೇಕು. ಪುನರ್ವಸತಿ ವ್ಯವಸ್ಥೆಯ ಕ್ರಿಯಾ ಯೋಜನೆ ಮಾಡಬೇಕು. ಆ ಬಳಿಕವೇ ಜಮೀನು ವಶಪಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ನೀತಿ ಸ್ಪಷ್ಟಪಡಿಸುತ್ತದೆ.2016ರಲ್ಲಿ ವಿಶೇಷ ಆರ್ಥಿಕ ವಲಯದ ಉಪಾಧ್ಯಕ್ಷ ಸೂರ್ಯನಾರಾಯಣರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಸಾಮಾಜಿಕ ಪರಿಣಾಮ ಮಾಪನಾ ವರದಿ ತಯಾರಿಸಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಆದರೆ 2008ರಲ್ಲೇ ಈ ಕಂಪೆನಿಗೆ ಎನ್ವಿರಾನ್‌ಮೆಂಟಲ್ ಕ್ಲಿಯರೆನ್ಸ್ ನೀಡಿದ್ದು ತಿಳಿಯಿತು. ಇದನ್ನು ಹೇಗೆ ನೀಡಿದಿರಿ ಎಂಬ ಪತ್ರಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ ಎಂದು ಡಾ. ರವೀಂದ್ರನಾಥ ಶ್ಯಾನ್ ಬಾಗ್ ಹೇಳಿದರು.
ಎಂಆರ್‌ಪಿಎಲ್ ಹಾಗೂ ಮಂಗಳೂರು ಎಂಎಸ್‌ಇಝಡ್ ಕಂಪೆನಿಗಳಿಂದ ರಾಷ್ಟ್ರೀಯ ನೀತಿ ವಿರೋಧಿ ಹಾಗೂ ಕಾನೂನುಬಾಹಿರ ವ್ಯವಹಾರಗಳು ಉತ್ತರಿಸುವವರಾರು? ಎಂಬ ಡಾ. ರವೀಂದ್ರನಾಥ ಶ್ಯಾನ್‌ಭಾಗ್‌ರ ತನಿಖಾ ವರದಿಯನ್ನು ಕುಡುಬಿ ಪದವಿನ ಕೃಷಿಕ-ಹೋರಾಟಗಾರ ಮಲ್ಲಪ್ಪ ಗೌಡ ಅನಾವರಣಗೊಳಿಸಿದರು.
ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ವಕ್ತಾರ ಟಿ.ಆರ್.ಭಟ್ ಸ್ವಾಗತಿಸಿದರು. ನಟೇಶ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.