×
Ad

ನಾಲ್ಕು ಮಂದಿಗೆ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ

Update: 2018-11-10 19:05 IST

ಮಂಗಳೂರು, ನ.10: ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ ‘ಮಾಮ್’ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ) ವತಿಯಿಂದ ಕೊಡಮಾಡುವ ಪ್ರಥಮ ವರ್ಷದ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಕಾರ್ಯಕ್ರಮವು ಶನಿವಾರ ನಗರದ ಬಿಜೈಯಲ್ಲಿರುವ ಆ್ಯಡ್ ಐಡಿಯಾ ಕಚೇರಿಯಲ್ಲಿ ನಡೆಯಿತು.

ಸ್ನಾತಕೋತ್ತರ ಮತ್ತು ಪದವಿ ವಿಭಾಗದಿಂದ ತಲಾ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪದವಿ ವಿಭಾಗದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರೀತಿ ಆರ್.ಭಟ್(ಪ್ರಥಮ), ಸುವರ್ಚಲಾ ಅಂಬೇಕರ್ ಬಿ.ಎಸ್.(ದ್ವಿತೀಯ), ಸ್ನಾತಕೋತ್ತರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಂಸಿಜೆ ವಿದ್ಯಾರ್ಥಿನಿ ಮೇಘಲಕ್ಷ್ಮಿ ಎಂ.(ಪ್ರಥಮ) ಹಾಗೂ ದ್ವಿತೀಯ ಸ್ಥಾನವನ್ನು ಮೂಡುಬಿದಿರೆ ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿ ಪ್ರಕಾಶ್ ಡಿ. ರಾಂಪೂರ್ ಅವರಿಗೆ ಹಿರಿಯ ಪತ್ರಕರ್ತ ಎಂ.ರಘುರಾಮ್ ಹಾಗೂ ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಶಸ್ತಿ ಪ್ರದಾನಿಸಿದರು.

ಪ್ರಶಸ್ತಿಯು ಪ್ರಥಮ ತಲಾ 5,000 ರೂ. ಹಾಗೂ ದ್ವಿತೀಯ 2,500 ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿತ್ತು. ಮಂಗಳೂರು ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಶಶಿಧರ್, ಮಾಮ್ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್.ಉಪಸ್ಥಿತರಿದ್ದರು.

ಎನ್‌ಸ್ಪೈರ್ ಅವಾರ್ಡ್ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಶಸ್ತಿಯ ಉದ್ದೇಶದ ಕುರಿತು ವಿವರಿಸಿದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ.ಪಳ್ಳಿ ವಂದಿಸಿದರು. ಸದಸ್ಯ ಕೃಷ್ಣಮೋಹನ ತಲೆಂಗಳ ಕಾರ್ಯಕ್ರಮ ನಿರೂಪಿಸಿದರು. ಮಾಮ್ ಸದಸ್ಯ ಕೃಷ್ಣ ಕಿಶೋರ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News