ಮಂಗಳೂರು: ಉಷಾಪ್ರಭಾ ಎನ್. ನಾಯಕ್ ರಿಗೆ ಡಾಕ್ಟರೇಟ್
ಮಂಗಳೂರು, ನ. 10: ಮಂಗಳೂರಿನ ಪ್ರತಿಷ್ಠಿತ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು ಬರೆದಿರುವ ‘ಎನ್ ಎಂಪಿರಿಕಲ್ ಸ್ಟಡಿ ಆಫ್ ದಿ ಬ್ರ್ಯಾಂಡ್ ಬಿಲ್ಡಿಂಗ್ ಆಫ್ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಷನ್ಸ್ ಇನ್ ಕರ್ನಾಟಕ-ಎ ಸ್ಟ್ರಾಟಜಿಕ್ ಫ್ರೇಮ್ ವರ್ಕ್’ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಸಂಸ್ಥೆಯು ಡಾಕ್ಟರೇಟ್ ನೀಡಿ ಗೌರವಿಸಿದೆ.
ಶನಿವಾರ ಎನ್‌ಐಟಿಕೆಯಲ್ಲಿ ನಡೆದ ಸಂಸ್ಥೆಯ 16ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್ ಪ್ರದಾನಿಸಲಾಯಿತು.
ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ವಿಜಯ ಹೆಗ್ಡೆ, ಎನ್‌ಐಟಿಕೆಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಬಲವೀರ ರೆಡ್ಡಿ, ಎನ್‌ಐಟಿಕೆ ನಿರ್ದೇಶಕ ಪ್ರೊ. ಕೆ. ಉಮಾ ಮಹೇಶ್ವರ ರಾವ್ ಉಪಸ್ಥಿತರಿದ್ದರು.
ಡಾ. ಉಷಾಪ್ರಭಾ ನಾಯಕ್ ಅವರ ಈ ಪ್ರೌಢ ಪ್ರಬಂಧವು ಉನ್ನತ ಶಿಕ್ಷಣ ಸಂಸ್ಥೆಗಳ ನಿಷ್ಠೆ ಆಧರಿತ ಬ್ರ್ಯಾಂಡ್ ಈಕ್ವಿಟಿ ಮಾದರಿಗೆ ಕಾರಣವಾಗಿದೆ. ಅಲ್ಲದೆ ಸಂಸ್ಥೆಗಳಿಗೆ ಅವರ ಬ್ರ್ಯಾಂಡ್‌ನ್ನು ವಿದ್ಯಾರ್ಥಿ ನಿಷ್ಠೆಯ ಆಧಾರದ ಮೇಲೆ ನಿರ್ಮಿಸಲು ಸಹಕಾರಿಯಾಗಿದೆ. ಈ ಪ್ರೌಢ ಸಂಶೋಧನಾ ಪ್ರಬಂಧವು ಶೈಕ್ಷಣಿಕವಾಗಿ ವಿದ್ಯಾರ್ಥಿ ಹಾಗೂ ಆಡಳಿತ ಮಂಡಳಿಯ ನಡುವೆ ಸಾಂಸ್ಥಿಕ ಬ್ರ್ಯಾಂಡ್ ಅಭಿವೃದ್ಧಿಯ ದೃಷ್ಟಿಕೋನಗಳನ್ನು ಒಳಗೊಂಡಿದೆ. ಇವರ ವೈಜ್ಞಾನಿಕ ಸಾಕ್ಷ್ಯಾಧರಿತ ಸಂಶೋಧನಾ ವಿಧಾನಕ್ಕೆ ವಿಷಯ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಾ. ಉಷಾಪ್ರಭಾ ನಾಯಕ್ ಅವರು ಬರೆದಿರುವ ಹಲವಾರು ಸಂಶೋಧನಾತ್ಮಕ ಪ್ರಬಂಧಗಳು, ಬರಹಗಳು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಅಲ್ಲದೆ ಹಲವಾರು ಪ್ರತಿಷ್ಠಿತ ವಿಚಾರ ಸಂಕಿರಣಗಳಲ್ಲಿ ತನ್ನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಈ ಪೈಕಿ 2013ರಲ್ಲಿ ನಡೆದ ‘ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನ ಸಂಯೋಜನೆ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಶ್ರೇಷ್ಠ ಪ್ರಬಂಧ ಮಂಡನೆ ಪ್ರಶಸ್ತಿಯನ್ನೂ ಪಡೆದಿದ್ದಾರೆ.