ಉಡುಪಿ ಸಿಟಿ ಬಸ್‌ಗಳಲ್ಲಿ ಟಿಕೇಟ್ ರಹಿತರಿಗೆ ದಂಡ
ಉಡುಪಿ, ನ.10: ಉಡುಪಿ ನಗರದೊಳಗೆ ಸಂಚರಿಸುವ ಸಿಟಿಬಸ್‌ಗಳಲ್ಲಿ ಟಿಕೇಟ್ ಚಕ್ಕಿಂಗ್ ಪ್ರಾರಂಭಗೊಂಡಿದ್ದು, ಕಳೆದ ಮೂರು ದಿನಗಳಲ್ಲಿ 11 ಮಂದಿ ಟಿಕೇಟ್ ರಹಿತ ಪ್ರಯಾಣಿಕರಿಗೆ ತಲಾ 500ರೂ.ನಂತೆ ದಂಡ ವಿಧಿಸಲಾಗಿದೆ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಸಿಟಿ ಬಸ್‌ಗಳಲ್ಲಿ ಮಾಸಿಕ ಪಾಸ್ ಪಡೆಯಲು ಅರ್ಜಿ ಸ್ವೀಕರಿಸುವ ಅವಧಿಯನ್ನು ನ.20ರವರೆಗೆ ವಿಸ್ತರಿಸಲಾಗಿದೆ. ಸಿಟಿ ಬಸ್‌ಗಳಲ್ಲಿ ಹೊಸ ಮಾಸಿಕ ಪಾಸ್ ವ್ಯವಸ್ಥೆಗೆ ಅತ್ಯುತ್ತಮ ಪ್ರಯಾಣಿಕರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. ನ.20ರ ನಂತರ ಪಾಸ್ ಪಡೆಯದ ಪ್ರಯಾಣಿಕರಿಗೆ ಪೂರ್ತಿ ದರವನ್ನು ವಿಧಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಉಡುಪಿಯ ಸಿಟಿ ಬಸ್‌ಗಳಲ್ಲಿ ಮುಂಗಡ ಪಾವತಿಸಿ ಮಾಸಿಕ ಆರ್‌ಎಫ್‌ಐಡಿ ಕಾರ್ಡ್ ಪಡೆಯುವ ನಿತ್ಯ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿ ಗಳಿಗೆ ಅವರು ಕಾರ್ಡ್ ಪಡೆದ ಮಾರ್ಗದಲ್ಲಿ ದಿನದಲ್ಲಿ ಎಷ್ಟು ಬಾರಿ ಬೇಕಿದ್ದರೂ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಕಾರ್ಡ್ ಇಲ್ಲದವರು ಪೂರ್ತಿ ಚಾರ್ಜ್ ಕೊಟ್ಟು ಪ್ರಯಾಣಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ.
ಸಿಟಿ ಬಸ್‌ಗಳಲ್ಲಿ ಟಿಕೇಟ್ ತಪಾಸಣೆಗಾಗಿ ತಪಾಸಣಾಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಟಿಕೇಟ್ ರಹಿತ ಪ್ರಯಾಣಿಕರಿಗೆ 500ರೂ.ವರೆಗೆ ದಂಡ ವಿಧಿಸಲು ಮೋಟಾರು ವಾಹನ ಕಾಯಿದೆಯಡಿ ಅವಕಾಶವಿದೆ ಎಂದವರು ತಿಳಿಸಿದ್ದಾರೆ.