ಪುತ್ತೂರು : ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕನ ಮೃತ್ಯು
ಪುತ್ತೂರು, ನ. 10 : ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿರರೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಅಂಬಟೆ ಮೂಲೆ ಸಮೀಪ ಶನಿವಾರ ಸಂಭವಿಸಿದೆ.
ಬಡಗನ್ನೂರು ಗ್ರಾಮದ ಸೋಣಂಗಿರಿ ನಿವಾಸಿ ನಾರಾಯಣ ನಾಯ್ಕ (37) ಮೃತಪಟ್ಟವರು. ಅಡಿಕೆ ಮತ್ತು ತೆಂಗಿನ ಕಾಯಿ ತೆಗೆಯುವ ಕಾಯಕ ನಡೆಸುತ್ತಿದ್ದ ನಾರಾಯಣ ನಾಯ್ಕ ಅವರು ಅಂಬಟೆಮೂಲೆ ಸಮೀಪದ ಜಯಕುಮಾರ್ ಎಂಬವರ ತೋಟದಲ್ಲಿ ತೆಂಗಿನ ಕಾಯಿ ತೆಗೆಯಲು ತೆಂಗಿನ ಮರವೊಂದನ್ನು ಏರುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.
ಮೂಲತಃ ವಿಟ್ಲ ಪೆರುವಾಯಿ ನಿವಾಸಿಯಾಗಿದ್ದ ನಾರಾಯಣ ನಾಯ್ಕ ಅವರು ಸೋಣಂಗೇರಿಯಲ್ಲಿರುವ ತನ್ನ ಪತ್ನಿಯ ತಂದೆಯ ಜಾಗದಲ್ಲಿ ಪ್ರತ್ಯೇಕ ಮನೆಮಾಡಿಕೊಂಡು ವಾಸ್ತವ್ಯವಿದ್ದರು.ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಅಡಿಕೆ ಮತ್ತು ತೆಂಗಿನ ಕಾಯಿ ತೆಗೆಯುವ ಕಾಯಕ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಪತ್ನಿಯ ತಂದೆ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.