ಕ್ಯಾಂಪಸ್ ಫ್ರಂಟ್‌ನಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಮಂಗಳೂರು, ನ.10: ಡಾ. ಮೌಲಾನ ಅಬುಲ್ ಕಲಾಂ ಆಝಾದ್ ಸ್ಮರಣಾರ್ಥ ಆಚರಿಸುವ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ ಪ್ರಯುಕ್ತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯಿಂದ ನಗರದ ಬದ್ರಿಯಾ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ವಿಚಾರಗೋಷ್ಠಿ ನಡೆಯಿತು.
ಮುಖ್ಯಅತಿಥಿಯಾಗಿ ಅಗಮಿಸಿದ ಯುನಿವೆಫ್ ರಾಜ್ಯಾಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಮಾತನಾಡಿ, ಮೌಲಾನ ಅಬುಲ್ ಕಲಾಂ ಆಝಾದರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದರು. ಅವರ ಜ್ಞಾನ ಮತ್ತು ವಿಚಾರಧಾರೆಗಳನ್ನು ಗಮನಿಸಿ ಅಂದಿನ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಪ್ರಥಮ ಶಿಕ್ಷಣ ಸಚಿವರನ್ನಾಗಿ ಮಾಡಿದರು. ಆಝಾದ್‌ರು ದೇಶದ ಶಿಕ್ಷಣ ವ್ಯವಸ್ಥೆಗೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಆಝಾದರ ತ್ಯಾಗವನ್ನು ಸಮಾಜಕ್ಕೆ ತಿಳಿಸದಿರುವುದು ವಿಪರ್ಯಾಸವಾಗಿದೆ. ಅವರ ಸಾಧನೆಗಳನ್ನು ಗೌರವಿಸಿ ಸರಕಾರ ಭಾರತರತ್ನವನ್ನು ನಿಧನರಾಗಿ 33 ವರ್ಷ ಬಳಿಕ ನೀಡಿರುವುದು ಖೇದಕರ ಎಂದು ಹೇಳಿದರು.
ಈ ಸಂದರ್ಭ ಶಿಕ್ಷಣ ದಿನದ ಪ್ರಯುಕ್ತ ಆಹ್ವಾನಿಸಲಾದ ‘ಭಾರತೀಯ ಶಿಕ್ಷಣ ವ್ಯವಸ್ಥೆ’ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಲಫೀರ ಸುಹೈಲ ಗಡಿಯಾರ (ಪ್ರಥಮ), ಅಫ್ರಾಝ್ ಸುಳ್ಯ (ದ್ವಿತೀಯ) ಹಾಗೂ ಅಸೀಬಾ ಬಾನು ಕಲ್ಲಡ್ಕ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.
ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಇರ್ಷಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬದ್ರಿಯಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ಯೂಸುಫ್, ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ. ಮತ್ತು ಬದ್ರಿಯಾ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಫ್ರೀದ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುಹಮ್ಮದ್ ನಿರೂಪಿಸಿ, ವಂದಿಸಿದರು.