ಸಾರ್ವಜನಿಕರಿಗೆ ಎಸ್‍ಡಿಪಿಐ, ಯುವ ಕಾಂಗ್ರೆಸ್‍ನಿಂದ ಉಚಿತ ಅಂಬುಲೆನ್ಸ್ ಸೇವೆ

Update: 2018-11-10 15:34 GMT

ಪುತ್ತೂರು, ನ. 10: ಇತ್ತೀಚೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ನಡೆಸಲಾದ ಪ್ರತಿಭಟನೆಯಲ್ಲಿ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಭಯದ ವಾತಾವರಣ ಸೃಷ್ಟಿಸಲಾಗಿದೆ ಎಂದು ಖಾಸಗಿ ಆಸ್ಪತ್ರೆಯ ಪ್ರಸೂತಿ ತಜ್ಞರು ಇಂದು ಮುಷ್ಕರ ನಡೆಸಿದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ಹೆರಿಗೆ ವೈದ್ಯರು ಲಭ್ಯವಿರಲಿಲ್ಲ. 

ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾದಂತೆ ಪುತ್ತೂರಿನಲ್ಲಿ ಎಸ್‍ಡಿಪಿಐ ಮತ್ತು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆಯನ್ನು ಮಾಡಲಾಗಿತ್ತು. ಅಂಬುಲೆನ್ಸ್ ಮೂಲಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಹಾಗೂ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ತಲುಪಿ ಸಲು ಉಚಿತ ವ್ಯವಸ್ಥೆ ಕಲ್ಪಿಸಲಾಗಿತ್ತು. ತಾಲೂಕಿನಾದ್ಯಂತ ಈ ಉಚಿತ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. 

ಪುತ್ತೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ವತಿಯಿಂದ ಮಾಡಲಾಗಿದ್ದ ಅಂಬುಲೆನ್ಸ್ ವ್ಯವಸ್ಥೆಗೆ ಜಿ.ಪಂ. ಸ್ಥಾಯಿ ಸಮಿತಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪುತ್ತೂರು ಸರ್ಕಾರಿ ಆಸ್ಪತ್ರೆ ಯಲ್ಲಿ ಚಾಲನೆ ನೀಡಿದರು.

ಯುವ ಕಾಂಗ್ರೆಸ್ ವತಿಯಿಂದ ವ್ಯವಸ್ಥೆಗೊಳಿಸಲಾದ ಶನಿವಾರ ರಾತ್ರಿಯ ತನಕ ಅಂಬುಲೆನ್ಸ್‍ನಲ್ಲಿ 3 ಹೆರಿಗೆಯ ಹಾಗೂ ಒಂದು ಅಪಘಾತದ ಗಾಯಾಳು ವನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಾಗಿದೆ ಎಂದು ಪುತ್ತೂರು ವಿಧಾನಸಭಾಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಎಸ್‍ಡಿಪಿಐ ವತಿಯಿಂದ ಪುತ್ತೂರು ತಾಲೂಕಿನಲ್ಲಿ 6 ಅಂಬುಲೆನ್ಸ್ ಹಾಗೂ ಇತರ ವಾಹಗಳ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ರಾತ್ರಿಯ ತನಕ ಒಟ್ಟು 4 ಹೆರಿಗೆ ಹಾಗೂ ಒಂದು ಇತರ ಅನಾರೋಗ್ಯ ಪೀಡಿತರನ್ನು ಸಾಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್‍ಡಿಪಿಐ ಪುತ್ತೂರು ವಿಧಾನ ಸಭಾಕ್ಷೇತ್ರ ಸಮಿತಿ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ತಿಳಿಸಿದ್ದಾರೆ.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರಸೂತಿ ತಜ್ಞೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಖಾಸಗಿ ಆಸ್ಪತ್ರೆಯ ವೈದ್ಯೆ ಮುಷ್ಕರದ ಹಿನ್ನಲೆಯಲ್ಲಿ ಗೈರು ಹಾಜರಾಗಿದ್ದರು. ಕೋರಿಕೆಯ ಮೇರೆಗೆ ಮಂಗಳೂರಿನ ಆಸ್ಪತ್ರೆಯ ಇಬ್ಬರು ಪ್ರಸೂತಿ ತಜ್ಞರು ಹಾಗೂ ಇಬ್ಬರು ಅರೆವಳಿಕೆ ತಜ್ಞರು ಶನಿವಾರ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಈ ತಜ್ಞ ವೈದ್ಯರು ಇಬ್ಬರು ಮಹಿಳೆಯರ ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಯ ಹಿನ್ನಲೆಯಲ್ಲಿ ಮಂಗಳೂರಿಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News