ದೇಶದಲ್ಲಿ ಗೋಸಂಪತ್ತು ಇಳಿಮುಖ: ಶ್ರೀವಿನಾಯಕಾನಂದ ಸ್ವಾಮೀಜಿ
ಉಡುಪಿ, ನ.10: ದೇಶಕ್ಕೆ ಸ್ವಾತಂತ್ರ ದೊರೆಯುವ ಸಂದರ್ಭ 30ಕೋಟಿ ಜನಸಂಖ್ಯೆಗೆ 30ಕೋಟಿ ಗೋವುಗಳು ನಮ್ಮಲ್ಲಿದ್ದವು. ಆದರೆ ಈಗ ಗೋ ಸಂಪತ್ತು ನಾಶವಾಗಿ ಅದರ ಸಂಖ್ಯೆ ಮೂರು ಕೋಟಿಗೆ ಇಳಿದಿದೆ ಎಂದು ಬೈಲೂರು ಮಠದ ಶ್ರೀವಿನಾಯಕಾನಂದ ಸ್ವಾಮೀಜಿ ಹೇಳಿದ್ದಾರೆ.
ಕಿನ್ನಿಗೋಳಿ ಶ್ರೀಶಕ್ತಿದರ್ಶನ ಯೋಗಾಶ್ರಮದ ವತಿಯಿಂದ ಶನಿವಾರ ಉಡುಪಿ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಆಯೋಜಿಸಲಾದ ಉಡುಪಿ ಸತ್ಸಂಗ ಪ್ರಸ್ತುತ ಪಡಿಸುವ ವಿಶ್ವಮಾತಾ ಗೋಮಾತಾ ನೃತ್ಯ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಾವಿಂದು ಗೋ ಮಾತೆಯಿಂದ ದೂರವಾಗುತ್ತ ಆರೋಗ್ಯವನ್ನು ಕಳೆದು ಕೊಳ್ಳುತ್ತಿದ್ದೇವೆ. ಪ್ರಕೃತಿಯೊಂದಿಗೆ ಜೀವನ ನಡೆಸಿ ಬದುಕಿನ ಆನಂದವನ್ನು ಪಡೆದುಕೊಳ್ಳಬೇಕು. ನಮ್ಮಲ್ಲಿರುವ ಪಶು ಭಾವ ನಾಶ ಮಾಡಿ, ಮಾನವ ಭಾವ ದಿಂದ ಪಾರಾಗಿ ದೈವ ಭಾವವನ್ನು ಪಡೆದುಕೊಳ್ಳಬೇಕು ಎಂದರು.
ಶಕ್ತಿದರ್ಶನ ಯೋಗಾಶ್ರಮದ ದೇವಬಾಬಾ ಗೋವಿನ ಮಹತ್ವದ ಕುರಿತು ಮಾತನಾಡಿ, ವಿದೇಶಿ ಜರ್ಸಿ ದನದ ಮೂತ್ರ, ಸೆಗಣಿ ಪವಿತ್ರ ಅಲ್ಲ. ಅದರ ಹಾಲು ವಿಷ. ಇದರಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬರುತ್ತವೆ. ಇಂದು ದಕ್ಷಿಣ ಭಾರತದ ಕೇರಳ, ಆಂಧ್ರ, ತಮಿಳುನಾಡುಗಳಲ್ಲಿ ದೇಶಿಯ ಗೋತಳಿಗಳೇ ಇಲ್ಲವಾಗಿವೆ ಎಂದು ತಿಳಿಸಿದರು.
ಇಂಡಿಯಾ ನೌವ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಶಾಂತಾರಾಮ್ ಅಚ್ಯುತ್ ಭಂಡಾರ್‌ಕರ್ ಉಪಸ್ಥಿತರಿದ್ದರು. ಜ್ಯೋತಿ ಶಾನುಭಾಗ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶಕುಂತಳಾ ಶೆಣೈ ಕಾರ್ಯಕ್ರಮ ನಿರೂಪಿಸಿ ವಂದಿಸಿ ದರು. ಬಳಿಕ ನೃತ್ಯ ನಾಟಕ ಪ್ರದರ್ಶನ ಗೊಂಡಿತು.