‘ಅವನಿ’ ಹತ್ಯೆ ಪ್ರಕರಣದ ತನಿಖೆಗೆ ಮಹಾರಾಷ್ಟ್ರ, ಕೇಂದ್ರ ಸರಕಾರದ ಪ್ರತ್ಯೇಕ ತಂಡ
ಮುಂಬೈ, ನ.10: ನರಭಕ್ಷಕ ಹುಲಿ ಎನ್ನಲಾದ ‘ಅವನಿ’ಯನ್ನು ಗುಂಡಿಟ್ಟು ಕೊಂದ ಪ್ರಕರಣದ ಕುರಿತ ವಿವಾದದ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆ ನಡೆಸಲು ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರಗಳು ಪ್ರತ್ಯೇಕ ತಂಡವನ್ನು ರಚಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ತನಿಖೆಗಾಗಿ ಪ್ರತ್ಯೇಕ ಸಮಿತಿಯೊಂದನ್ನು ಈಗಾಗಲೇ ರಚಿಸಿದೆ. ಹುಲಿ ಹತ್ಯೆಯ ಸಂದರ್ಭ ಮಾರ್ಗದರ್ಶಿ ಸೂತ್ರ ಹಾಗೂ ಕಾರ್ಯವಿಧಾನವನ್ನು ಉಲ್ಲಂಘಿಸಲಾಗಿದೆಯೇ ಎಂಬ ಬಗ್ಗೆ ಸ್ವತಂತ್ರ ಸಮಿತಿಯೊಂದರ ತನಿಖೆಗೆ ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ಆದೇಶಿಸಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌ಎಚ್ ಪಾಟೀಲ್ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಭಾರತೀಯ ವನ್ಯಜೀವಿ ಸಂಸ್ಥೆಯ ಪ್ರತಿನಿಧಿ ಬಿಲಾಲ್ ಹಬೀಬ್ , ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಅಧ್ಯಕ್ಷ ಅನೀಶ್ ಅಂಧೇರಿಯಾ ಸದಸ್ಯರಾಗಿರುತ್ತಾರೆ.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಯೋಜಕರಾಗಿರುತ್ತಾರೆ. ಕೇಂದ್ರ ಸರಕಾರದ ಸಮಿತಿಯಲ್ಲಿ ಎನ್‌ಟಿಸಿಎಯ ಹೇಮಂತ್ ಕಂಡಿ ಸಂಯೋಜಕರಾಗಿದ್ದು ಹಿರಿಯ ವನ್ಯಜೀವಿ ತಜ್ಞ ಒಪಿ ಕಾಲೆರ್ ಹಾಗೂ ಭಾರತೀಯ ವನ್ಯಜೀವಿ ಟ್ರಸ್ಟ್‌ನ ಸಹಾಯಕ ನಿರ್ದೇಶಕ ಜೋಸ್ ಲೂಯಿಸ್ ಸದಸ್ಯರಾಗಿರುತ್ತಾರೆ. ನವೆಂಬರ್ 2ರಂದು ‘ಅವನಿ’ ಎಂಬ ಹೆಣ್ಣುಹುಲಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದರಿಂದ ಹುಲಿಯ 11 ತಿಂಗಳ ಎರಡು ಮರಿಗಳು ಅನಾಥವಾಗಿದ್ದವು. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಪರ-ವಿರೋಧದ ಚರ್ಚೆಯಾಗಿತ್ತು. ಅಲ್ಲದೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂಟಿವರ್ ನಡುವೆ ವಾಗ್ಯುದ್ದ ನಡೆದಿತ್ತು ಮತ್ತು ಸುಧೀರ್ ಓರ್ವ ಕೊಲೆಗಡುಕನಾಗಿದ್ದು, ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಮೇನಕಾ ಆಗ್ರಹಿಸಿದ್ದರು. ರಾಜ್ಯ ಸರಕಾರ ಬೃಹತ್ ಉದ್ದಿಮೆದಾರರಿಗೆ ಅನುಕೂಲ ಮಾಡಿಕೊಡಲು ಅರಣ್ಯಗಳನ್ನು ನಾಶಗೊಳಿಸಿರುವುದರಿಂದ ವನ್ಯಜೀವಿಗಳು ನಾಡಿಗೆ ಲಗ್ಗೆಯಿಡುವಂತಾಗಿದೆ ಎಂದು ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಂತಾದ ಪಕ್ಷಗಳು ರಾಜ್ಯ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದವು.