ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದ್ದ ‘ಮಂಗಳೂರು ಮುಸ್ಲಿಮ್ಸ್’ ಪೇಜ್ ವಿರುದ್ಧ ದೂರು ದಾಖಲು
ಮಂಗಳೂರು, ನ.12: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದ್ದ ಆರೋಪದಲ್ಲಿ ‘ಮಂಗಳೂರು ಮುಸ್ಲಿಮ್ಸ್’ ಪೇಜ್ ವಿರುದ್ಧ ನಗರದ ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆ ‘ಮಂಗಳೂರು ಮುಸ್ಲಿಮ್ಸ್’ ಹೆಸರಿನ ಫೇಸ್ ಬುಕ್ ಪೇಜ್ ಸೋಮವಾರ ಬೆಳಗ್ಗೆ ವಿವಾದಾತ್ಮಕ ಪೋಸ್ಟ್‌ವೊಂದನ್ನು ಪ್ರಕಟಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೊಳಗಾಗಿತ್ತು. ಈ ಬಗ್ಗೆ ಜಾಲತಾಣಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.
ಕೀಳುಮಟ್ಟದ ಪೋಸ್ಟ್ ಹಾಕಿದ್ದಕ್ಕೆ ಮುಸ್ಲಿಮರೂ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಗೆ ಒಂದು ಸಾವಿರದ ಐನೂರಕ್ಕೂ ಹೆಚ್ಚು ಕಮೆಂಟ್ ಬಂದಿದ್ದು, 335ಕ್ಕೂ ಅಧಿಕ ಮಂದಿ ಪೋಸ್ಟ್‌ನ್ನು ಶೇರ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಜಾಲತಾಣದಲ್ಲಿ ಹಲವು ಮಂದಿ ಒತ್ತಾಯಿಸಿದ್ದರು. ಕೊನೆಗೂ ಪಾಂಡೇಶ್ವರ ಪೊಲೀಸ್ ಸ್ವಯಂ ದೂರು ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
505(1) (ವದಂತಿ), (2) (ಸಾರ್ವಜನಿಕ ಕಿರುಕುಳ ಹೇಳಿಕೆ) ಸೆಕ್ಷನ್‌ಗಳಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮಕ್ಕಾಗಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.