ಸೈನಿಕ್ ಫಾರ್ಮ್‌ನ್ನು ಕ್ರಮಬದ್ಧಗೊಳಿಸುವ ಬಗ್ಗೆ ಸರಕಾರಿ ಸಮಿತಿಯ ಯೋಜನೆಯೇನು?

Update: 2018-11-12 14:05 GMT

ಹೊಸದಿಲ್ಲಿ,ನ.12: ದಕ್ಷಿಣ ದಿಲ್ಲಿಯ ಐಷಾರಾಮಿ ಪ್ರದೇಶ ಸೈನಿಕ್ ಫಾರ್ಮ್‌ನಲ್ಲಿಯ ಅಕ್ರಮ ನಿರ್ಮಾಣಗಳನ್ನು ಕ್ರಮಬದ್ಧಗೊಳಿಸುವ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಲು ಕಳೆದ ವರ್ಷದ ಮೇ ತಿಂಗಳಲ್ಲಿ ರಚಿಸಲಾಗಿರುವ ಸಮಿತಿಯು ಅಕ್ರಮ ಕಟ್ಟಡಗಳ ಕುರಿತು ಯಾವ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ಮುಂದಿನ ವಿಚಾರಣಾ ದಿನಾಂಕದಂದು ಸಮಿತಿಯು ನಡೆಸಿರುವ ಚರ್ಚೆಗಳ ವಿವರಗಳನ್ನು ತನಗೆ ಸಲ್ಲಿಸುವಂತೆ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಮತ್ತು ನ್ಯಾ.ವಿ.ಕೆ.ರಾವ್ ಅವರ ಪೀಠವು ಕೇಂದ್ರ ಸರಕಾರದ ಸ್ಥಾಯಿ ವಕೀಲ ಅನುರಾಗ ಅಹ್ಲುವಾಲಿಯಾ ಅವರ ಮೂಲಕ ನಗರಾಭಿವೃದ್ಧಿ ಸಚಿವಾಲಯಕ್ಕೆ ಸೂಚಿಸಿತು.

ಸೈನಿಕ್ ಫಾರ್ಮ್ ಪ್ರದೇಶದ ಕೆಲವು ನಿವಾಸಿಗಳು ತಮ್ಮ ನಿವಾಸಗಳಿಗೆ ಹೊಸದಾಗಿ ಬಣ್ಣ ಬಳಿಯಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಚಿವಾಲಯ,ದಿಲ್ಲಿ ಸರಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳಿಗೆ ನೋಟಿಸ್‌ಗಳನ್ನೂ ನ್ಯಾಯಾಲಯವು ಹೊರಡಿಸಿತು. ನ್ಯಾಯಾಲಯದ ಈ ಹಿಂದಿನ ಕೆಲವು ಆದೇಶಗಳು ಪ್ರದೇಶದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳು ಮತ್ತು ನಿರ್ಮಾಣ ಸಾಮಗ್ರಿಗಳ ಪ್ರವೇಶವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಈ ಅನುಮತಿಯನ್ನು ಕೋರಲಾಗಿದೆ. ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಲು ನಿರಾಕರಿಸಿದ ನ್ಯಾಯಾಲಯವು ಜ.20ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿತು.

ಸೈನಿಕ್ ಫಾರ್ಮ್ ಕಾಲನಿಯಲ್ಲಿನ ಅಕ್ರಮ ನಿರ್ಮಾಣಗಳನ್ನು ಕ್ರಮಬದ್ಧ ಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಮನೆಗಳಿಗೆ ಬಣ್ಣ ಬಳಿಯಲು ಅನುಮತಿಯನ್ನು ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News