ಚುನಾವಣೆಯಲ್ಲೂ ಸ್ಪರ್ಧಿಸುತ್ತೇವೆ, ನ್ಯಾಯಾಲಯದಲ್ಲೂ ಪ್ರಶ್ನಿಸುತ್ತೇವೆ: ಲಂಕಾ ಪದಚ್ಯುತ ಪ್ರಧಾನಿ ವಿಕ್ರಮಸಿಂಘೆ ಪಕ್ಷ

Update: 2018-11-12 14:24 GMT

ಕೊಲಂಬೊ, ನ. 12: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ದೇಶದ ಸಂಸತ್ತನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಯನ್ನು ಘೋಷಿಸಿರುವ ಹಿನ್ನೆಲೆಯಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಸಿದ್ಧರಿದ್ದೇವೆ ಎಂಬುದಾಗಿ ಉಚ್ಚಾಟಿತ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

‘‘ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಸಿದ್ಧರಿದ್ದೇವೆ, ಆದರೆ, ಈ ಚುನಾವಣೆ ಕಾನೂನುಬಾಹಿರವಾಗಿದೆ’’ ಎಂದು ವಿಕ್ರಮಸಿಂಘೆ ಸರಕಾರದಲ್ಲಿ ಹಣಕಾಸು ವ್ಯವಹಾರಗಳ ಸಹಾಯಕ ಸಚಿವರಾಗಿದ್ದ ಹರ್ಷ ಡಿ ಸಿಲ್ವ ಹೇಳಿದರು.

‘‘ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದಲ್ಲಿ ನಂಬಿಕೆ ಹೊಂದಿರುವ ನಾಗರಿಕರು ಭಾರೀ ಪ್ರಮಾಣದಲ್ಲಿ ನಮ್ಮನ್ನು ಬೆಂಬಲಿಸುತ್ತಿದ್ದಾರೆ’’ ಎಂದರು.

ಅದೇ ವೇಳೆ, ಸಂಸತ್ತನ್ನು ವಿಸರ್ಜಿಸಿದ ಅಧ್ಯಕ್ಷರ ಕ್ರಮವನ್ನು ದೇಶದ ಸರ್ವೋನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂಬುದಾಗಿ ವಿಕ್ರಮಸಿಂಘೆಯ ಪಕ್ಷ ಯುನೈಟೆಡ್ ನ್ಯಾಶನಲ್ ಪಾರ್ಟಿ ಘೋಷಿಸಿದೆ.

ಅಧ್ಯಕ್ಷರು ವಿಕ್ರಮಸಿಂಘೆಯನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದರು. ಆದರೆ, 225 ಸದಸ್ಯ ಸಂಸತ್ತಿನಲ್ಲಿ ತನ್ನ ಗುಂಪು ಬಹುಮತ ಪಡೆಯುವುದು ಕಷ್ಟ ಎನ್ನುವುದು ಮನವರಿಕೆಯಾದ ಬಳಿಕ, ಅಧ್ಯಕ್ಷ ಸಿರಿಸೇನ ಸಂಸತ್ತನ್ನೇ ವಿಸರ್ಜಿಸಿದ್ದಾರೆ.

ದ್ವೀಪ ರಾಷ್ಟ್ರದಲ್ಲಿ ಜನವರಿ 5ರಂದು ಮಧ್ಯಂತರ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News