ನ.14ರಿಂದ ಸಹಕಾರಿ ಸಪ್ತಾಹ ಆಚರಣೆ: ನೂತನ ಹಾಲಿನ ಉತ್ಪನ್ನ ಬಿಡುಗಡೆ

Update: 2018-11-12 14:38 GMT

ಮಂಗಳೂರು, ನ.12: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ವತಿಯಿಂದ 65ನೆ ಅಖಿಲ ಭಾರತ ಸಹಕಾರಿ ಸಪ್ತಾಹ ನ.14ರಿಂದ 20ರವರೆಗೆ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಹಯೋಗದೊಂದಿಗೆ ನಡೆಯಲಿದೆ ಇದೆ ಸಂದರ್ಭದಲ್ಲಿ ನೂತನ ಹಾಲಿನ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಮತ್ತು ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

‘ಗ್ರಾಮೀಣಾಭಿವೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆ ’ಎಂಬ ಧ್ಯೇಯದೊಂದಿಗೆ ಈ ಬಾರಿಯ ಸಪ್ತಾಹ ನಡೆಯಲಿದೆ.ನ.14ರಂದು ಕುಲಶೇಖರದ ಹಾಲಿನ ಡೈರಿ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ.

 ಜಿಲ್ಲಾ ಉಸ್ತವಾರಿ ಸಚಿವ ಯು.ಟಿ.ಖಾದರ್, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ , ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತಿಶ್ಚಂದ್ರ, ಕರ್ನಾಟಕ ಹಾಲು ಮಹಾ ಮಂಡಲದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಶಾಸಕರಾದ ಅಂಗಾರ, ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯಕ್, ಸಂಜೀವ ಮಠಂದೂರು , ಉಮಾನಾಥ ಕೊಟ್ಯಾನ್ , ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ ಸಲೀಂ ಮೊದಲಾದವರು ಭಾಗವಹಿಸಲಿದ್ದಾರೆ.

ಅನಂತ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಉದ್ಘಾಟನೆಯ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಪಡಿಸಲಾಗಿದೆ. ನ.15ರಂದು ಬೆಳ್ತಂಗಡಿಯ ನಾರಾಯಣ ಗುರು ಮಂದಿರದಲ್ಲಿ ಸವಯವ ಕೃಷಿ ಮತ್ತು ಶೂನ್ಯ ಬಂಡವಾಳದ ಕೃಷಿ ಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರದ ಕುರಿತು ಕಾರ್ಯಕ್ರಮ ನಡೆಯಲಿದೆ.

ನ.16ರಂದು ಮುಡಿಪು ಆಡಿಟೋರಿಯಂ ನಲ್ಲಿ ಸಹಕಾರಿ ಸಂಘಗಳ ವೌಲ್ಯವರ್ಧನ ಮತ್ತು ಬ್ರಾಂಡ್ ನಿರ್ಮಾಣದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ನ.17ರಂದು ಸಾರ್ವಜನಿಕ, ಖಾಸಗಿ ಮತ್ತು ಸಹಕಾರಿ ಸಹಭಾಗಿತ್ವ ನಿರ್ಮಾಣ ವಿಷಯದ ಬಗ್ಗೆ ಕಾರ್ಯಕ್ರಮ ಸುಳ್ಯ ತಾಲೂಕಿನ ಸಹಕಾರಿ ಸಂಘದ ಆಶ್ರಯದದಲ್ಲಿ ನಡೆಯಲಿದೆ.

ನ.18ರಂದು ಸಹಕಾರಿ ಸಂಸ್ಥೆಗಳ ಮೂಲಕ ಸಹಕಾರಿ ಯೋಜನೆಗಳು ಮತ್ತು ಆದಾಯೋತ್ಪನ್ನ ಕುರಿತು ಜಾಗೃತಿ ಕಾರ್ಯಕ್ರಮ ಸವಣೂರು ಸಹಕಾರಿ ಸಂಘಗಳ ಆಶ್ರಯದಲ್ಲಿ ನಡೆಯಲಿದೆ. ನ.19ರಂದು ಯುವಜನ ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ಎಂಬ ವಿಷಯದಲ್ಲಿ ಬೆಳುವಾಯಿ ಯಲ್ಲಿ ಕಾರ್ಯಕ್ರಮ ನಡೆಯಲಿದೆ. ನ.20ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಆವರಣದಿಂದ ಕೇಂದ್ರ ಸಹಕಾರಿ ಬ್ಯಾಂಕ್ ಅವರಣದ ವರೆಗೆ ಮರೆವಣಿಗೆ ನಡೆದು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಸಮಾರೋಪ ನಡೆಯಲಿದೆ ಎಂದು ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ನಂದಿನಿನ ಜೀರಾ ಮಜ್ಜಿಗೆ ಬಿಡುಗಡೆ:- ದಕ್ಷಿಣ ಕನ್ನಡ ಹಾಲು ಉತ್ಫಾದಕರ ಒಕ್ಕೂಟ ನಿಯಮಿತ ಹಾಲು ಸೇರಿದಂತೆ 26 ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಪೈಕಿ 27ನೆ ಉತ್ಪನ್ನ ನಂದಿನಿ ಜೀರಾ ಸಪ್ತಾಹದ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಸಿಪಿಪಿ ಬಾಟಲುಗಳಲ್ಲಿ ನಂದಿನಿ ಸುವಾಸಿತ ಹಾಲಿನ ಉತ್ಪನ್ನವನ್ನು ಸಂಸದ ನಳಿನ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘ ದ.ಕ ಮತ್ತು ಉಡುಪಿಯಲ್ಲಿ 198 ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದೊಂದಿಗೆ ಒಟ್ಟು 721 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಂದಿದೆ. ದಿನವಹಿ 4.2 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಈ ಪೈಕಿ 3.4ಲಕ್ಷ ಲೀಟರ್ ಹಾಲನ್ನು 4 ಶ್ರೇಣಿಗಳಲ್ಲಿ ಗ್ರಾಹಕರ ಬೇಡಿಕೆಯ ಅನುಸಾರ ಮಾರಾಟ ಮಾಡಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ನಂದಿನಿಯ 26 ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. 28 ಕೋಟಿ ರೂ ವೆಚ್ಚದಲ್ಲಿ ನೂತನ ಉತ್ಪನ್ನ ಘಟಕವನ್ನು ಸ್ಥಾಪಿಸಲಾಗಿದೆ. ಕೇರಳ, ಮಹಾರಾಷ್ಟ್ರ ಆಂಧ್ರ ಪ್ರದೇಶಕ್ಕೆ ಹಾಲು ಮಾರಾಟ ಮಾಡಲಾಗುತ್ತದೆ. ಮಂಡ್ಯ ಮತ್ತು ಶಿವಮೊಗ್ಗ ಒಕ್ಕೂಟದ ಹಾಲನ್ನು ಕೋ-ಪ್ಯಾಕಿಂಗ್ ಮಾಡಿ ಆಂಧ್ರಪ್ರದೇಶದ ಶಾಲಾ ಮಕ್ಕಳ ಯೋಜನೆಗೆ ನೀಡಲಾಗುತ್ತಿದೆ ಎಂದು ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಒಕ್ಕೂಟವು 2017-18ನೆ ಸಾಲಿನಲ್ಲಿ 807 ಕೋಟಿ ಆರ್ಥಿಕ ವಹಿವಾಟು ನಡೆಸಿ 6.71 ಕೋಟಿ ರೂ. ಲಾಭಗಳಿಸಿದೆ. 2018ರ ಡಿಸೆಂಬರ್ ಮಾಹೆಯಲ್ಲಿ ಉಡುಪಿ ಜಿಲ್ಲೆಯ ಉಪ್ಪೂರಿನಲ್ಲಿ 87 ಕೋಟಿ ರೂ ವೆಚ್ಚದಲ್ಲಿ 2.50ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಡೈರಿ ಲೋಕಾರ್ಪಣೆಗೊಳ್ಳಲಿದೆ ಎಂದು ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕೆ.ಜಯ ದೇವಪ್ಪ, ಡೈರಿ ವಿಭಾಗದ ವ್ಯವಸ್ಥಾಪಕ ಶಿವ ಶಂಕರಪ್ಪ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News