ರೊಹಿಂಗ್ಯಾ ವಾಪಸಾತಿ ಈ ವಾರ ಆರಂಭ: ಮ್ಯಾನ್ಮಾರ್ ಘೋಷಣೆ

Update: 2018-11-12 14:55 GMT

ಯಾಂಗನ್ (ಮ್ಯಾನ್ಮಾರ್), ನ. 12: ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರನ್ನು ಬಾಂಗ್ಲಾದೇಶದಿಂದ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಈ ವಾರ ಆರಂಭಗೊಳ್ಳಲಿದೆ ಎಂದು ಮ್ಯಾನ್ಮಾರ್‌ನ ಸಮಾಜ ಕಲ್ಯಾಣ, ಪರಿಹಾರ ಮತ್ತು ಪುನರ್ವಸತಿ ಸಚಿವ ವಿನ್ ಮಯತ್ ಅಯೆ ರವಿವಾರ ತಿಳಿಸಿದ್ದಾರೆ.

ಕಳೆದ ವರ್ಷ ಮ್ಯಾನ್ಮಾರ್‌ನ ಭದ್ರತಾ ಪಡೆಗಳು ನಡೆಸಿದ ದಮನ ಕಾರ್ಯಾಚರಣೆಯ ವೇಳೆ ಜೀವ ಉಳಿಸಿಕೊಳ್ಳುವುದಕ್ಕಾಗಿ 7 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ.

ತಿಂಗಳುಗಳ ಹಿಂದೆ ಒಪ್ಪಿಕೊಂಡ ವಾಪಸಾತಿಯು ಗುರುವಾರ ಆರಂಭಗೊಳ್ಳುವುದು ಎಂಬುದಾಗಿ ಬಾಂಗ್ಲಾದೇಶವು ಮ್ಯಾನ್ಮಾರ್ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಹೇಳಿದರು.

2,251 ಮಂದಿಯ ಆರಂಭಿಕ ತಂಡವನ್ನು ನವೆಂಬರ್ ಮಧ್ಯ ಭಾಗದಿಂದ ದಿನಕ್ಕೆ 150 ಮಂದಿಯಂತೆ ವಾಪಸ್ ಕರೆಸಲಾಗುವುದು ಎಂದು ಮ್ಯಾನ್ಮಾರ್ ಸರಕಾರದ ಹೇಳಿಕೆಯೊಂದು ತಿಳಿಸಿದೆ.

‘‘ನಿರ್ದಿಷ್ಟ ದಿನಾಂಕವು ಬಾಂಗ್ಲಾದೇಶದ ಕ್ರಮವನ್ನು ಅವಲಂಬಿಸಿದೆ. ಆ ದಿನ ವಾಪಸಾತಿ ಆರಂಭಗೊಳ್ಳುವುದೋ ಇಲ್ಲವೋ ಗೊತ್ತಿಲ್ಲ. ನಾವು ನಮ್ಮ ಕಡೆಯಿಂದ ಸಿದ್ಧರಿರಬೇಕಾಗಿದೆ ಹಾಗೂ ವಾಪಸಾತಿ ಸಂಭವಿಸುವಂತೆ ಮಾಡಲು ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ’’ ಎಂದು ವಿನ್ ಮಯತ್ ಅಯೆ ಹೇಳಿದರು.

ನನಗೆ ಗೊತ್ತಿಲ್ಲ: ಬಾಂಗ್ಲಾ ಅಧಿಕಾರಿ

ರೊಹಿಂಗ್ಯಾ ಮುಸ್ಲಿಮರ ವಾಪಸಾತಿಗಾಗಿ ದಿನಾಂಕ ನಿಗದಿಯಾಗಿರುವುದು ನನಗೆ ಗೊತ್ತಿಲ್ಲ ಎಂದು ಬಾಂಗ್ಲಾದೇಶದ ವಾಪಸಾತಿ ಕಮಿಶನರ್ ಅಬುಲ್ ಕಲಾಮ್ ಹೇಳಿದ್ದಾರೆ.

‘‘ನಮ್ಮ ವಿದೇಶ ಸಚಿವಾಲಯ ಅಥವಾ ಇತರ ಯಾವುದೇ ಉನ್ನತ ಪ್ರಾಧಿಕಾರಗಳಿಂದ ನನಗೆ ಸೂಚನೆ ಬಂದಿಲ್ಲ’’ ಎಂದು ಅವರು ತಿಳಿಸಿದರು.

ರೊಹಿಂಗ್ಯಾ ವಾಪಸಾತಿಗೆ ಸುರಕ್ಷಿತ ವಾತಾವರಣವಿಲ್ಲ: ಮಾನವಹಕ್ಕುಗಳ ಪ್ರತಿಪಾದಕರು

ರೊಹಿಂಗ್ಯಾ ಮುಸ್ಲಿಮರ ವಾಪಸಾತಿಗೆ ಮ್ಯಾನ್ಮಾರ್‌ನಲ್ಲಿ ಈಗಲೂ ಸುರಕ್ಷಿತ ವಾತಾವರಣ ನಿರ್ಮಾಣವಾಗಿಲ್ಲ ಎಂದು ಮಾನವಹಕ್ಕುಗಳ ಪ್ರತಿಪಾದಕರು ಹೇಳುತ್ತಾರೆ.

ಬೌದ್ಧ ಬಹುಸಂಖ್ಯಾತ ದೇಶದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಅಗಾದ ಪ್ರಮಾಣದಲ್ಲಿ ಪೂರ್ವಾಗ್ರಹಗಳಿವೆ ಎಂದು ಅವರು ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ಮತ್ತು ನಾಗರಿಕ ಹಕ್ಕುಗಳನ್ನು ನಿರಾಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News