ರಾಹುಲ್ ಗಾಂಧಿಯನ್ನು ಭೇಟಿಯಾದ ಟ್ವಿಟರ್ ಸಿಇಒ

Update: 2018-11-12 16:02 GMT

ಹೊಸದಿಲ್ಲಿ, ನ. 12: ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಕಲಿ ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಹಾಗೂ ಆರೋಗ್ಯಕರ ಸಂವಹನ ಉತ್ತೇಜಿಸಲು ತಮ್ಮ ಜಾಲ ತಾಣ ಕೈಗೊಳ್ಳಬೇಕಾದ ಕ್ರಮಗಳು ಕುರಿತು ಅವರು ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಜಾಗತಿಕವಾಗಿ ಹೆಚ್ಚು ಪ್ರಾಬಲ್ಯ ಪಡೆಯುವ ದಿಶೆಯಲ್ಲಿ ಟ್ವಿಟ್ಟರ್ ಬೆಳೆಯುತ್ತಿದೆ. ನಕಲಿ ಸುದ್ದಿಗಳ ಹರಡುವುದನ್ನು ನಿಯಂತ್ರಿಸಲು ಹಾಗೂ ಆರೋಗ್ಯಕರ ಸಂವಹನಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಜಾಕ್ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಜಾಗತಿಕವಾಗಿ 336 ದಶಲಕ್ಷ ಬಳಕೆದಾರರನ್ನು ಹೊಂದಿರುವ ಟ್ವಿಟರ್ ತನ್ನ ತಾಣದಲ್ಲಿ ಸಮಷ್ಠಿ ಆರೋಗ್ಯ, ನಾಗರಿಕವಾಗಿರುವ ಸಂವಹನವನ್ನು ಹೆಚ್ಚಿಸಲು ಕಠಿಣವಾಗಿ ಶ್ರಮಿಸುತ್ತಿದೆ. ಡೋರ್ಸೆ ಅವರು ಕಳೆದ ವಾರ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದಾರೆ. ಅದೇ ವಾರಾಂತ್ಯದಲ್ಲಿ ಅವರು ದಲೈ ಲಾಮಾ ಅವರನ್ನು ಕೂಡ ಭೇಟಿಯಾಗಿದ್ದರು. ಈ ಸಂದರ್ಭ ಅವರು ದಲೈ ಲಾಮಾ ಅವರನ್ನು ‘ಅದ್ಭುತ ಬೋಧಕರು’ ಎಂದು ಶ್ಲಾಘಿಸಿದ್ದರು.

ದೇಶದ ಐದು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಕಲಿ ಸುದ್ದಿಗಳು ಹಾಗೂ ತಪ್ಪು ಮಾಹಿತಿ ಹರಡುತ್ತಿರುವಲ್ಲಿ ಟ್ವಿಟರ್‌ನ ಪಾತ್ರದ ಬಗ್ಗೆ ಟೀಕೆ ಹೆಚ್ಚುತ್ತಿದೆ. ಅದಕ್ಕಾಗಿ ಡೋರ್ಸೆ ಅವರು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರನ್ನು ಭೇಟಿಯಾಗುವುದಾಗಿ ನಿರೀಕ್ಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News