ಸಚಿವ ಅನಂತ್ ಕುಮಾರ್ ನಿಧನಕ್ಕೆ ಪೇಜಾವರ, ಪಯಾರ್ಯಶ್ರೀಗಳ ಸಂತಾಪ

Update: 2018-11-12 15:46 GMT

ಉಡುಪಿ, ನ.12: ರಾಜ್ಯದ ನಾಯಕರಲ್ಲಿ ಒಬ್ಬರಾದ ಅನಂತಕುಮಾರ್ ನಿಧನದಿಂದ ನಮಗೆ ಅತ್ಯಂತ ವಿಷಾದವಾಗಿದೆ. ಕೇಂದ್ರ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಬಹುಮುಖವಾದ ಸೇವೆಯನ್ನು ಸಲ್ಲಿಸಿದ ಧೀಮಂತ ನೇತಾರರಾಗಿದ್ದರು. ನಮ್ಮ ಪರ್ಯಾಯದ ಅವಧಿಯಲ್ಲಿ ನಿರ್ಮಾಣಗೊಂಡ ಕನಕ ಮಂಟಪ, ಪಾಜಕ ಕ್ಷೇತ್ರದ ಅಭಿವೃದ್ಧಿ ಮುಂತಾದ ಅನೇಕ ಕಾರ್ಯಗಳಿಗೆ ಸರಕಾರದಿಂದ ಸಹಾಯ ಕೊಡಿಸಿದ್ದರು. ದಕ್ಷರೂ,ತರುಣರೂ,ಉತ್ಸಾಹಶೀಲರೂ ಆಗಿರುವ ಇವರಿಂದ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಸೇವೆ ದೊರೆಯುವ ನಿರೀಕ್ಷೆಯಿತ್ತು. ಇವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಪರ್ಯಾಯ ಪಲಿಮಾರುಶ್ರೀ: ದೇಶ ಕಂಡ ಧೀಮಂತ ಸಂಸದೀಯಪಟು ಮತ್ತು ಸಂಪನ್ನ ನಾಯಕರು ಅನಂತಕುಮಾರ್. ಇವರು ತಮ್ಮ ಸಹಜ ಗುಣಗಳಿಂದಲೇ ದೇಶದ ಉನ್ನತಸ್ತರದ ನಾಯಕರ ಪಂಕ್ತಿಯಲ್ಲಿ ಸ್ಥಾನವನ್ನು ಸಂಪಾದಿಸಿದವರು. ಸಾಮಾಜಿಕ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದ್ದ ಇವರು ಅದಮ್ಯಚೇತನ ಸಂಸ್ಥೆಯ ಮೂಲಕ ಬೆಂಗಳೂರಿನ ಅನೇಕ ಪ್ರದೇಶಗಳ ಬಡಮಕ್ಕಳಿಗೆ ಆಶಾಕಿರಣವಾಗಿದ್ದರು. ಇವರ ಅಕಾಲಿಕ ನಿಧನದ ವಾರ್ತೆ ಯನ್ನು ಕೇಳಿ ನಮಗೆ ಸಂತಾಪವಾಗಿದೆ. ಭಗವಂತನು ಅಗಲಿದ ಆತ್ಮಕ್ಕೆ ಶಾಂತಿಯನ್ನು ನೀಡಲಿ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಉದಯಕುಮಾರ್ ಶೆಟ್ಚಿ, ರಾಜ್ಯದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News