ಯುಪಿಸಿಎಲ್‌ನಿಂದ 24 ಗಂಟೆ ವಿದ್ಯುತ್ ಪೊರೈಕೆಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಒತ್ತಾಯ

Update: 2018-11-12 16:47 GMT

ಉಡುಪಿ, ನ.12: ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಯೋಜನೆ ಕಾರ್ಯಾಚರಿಸುವ ಎಲ್ಲಾ ಪ್ರದೇಶಗಳ 50ಕಿ.ಮೀ. ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸುವ ನಿಯಮ ಜಾರಿಗೊಳಿಸುವಂತೆ ತಾವು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೇಲೆ ಒತ್ತಡ ಹೇರುವುದಾಗಿ ಮುಂಬೈಯ ಎನ್‌ಜಿಒ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಂತೆ ಪಡುಬಿದ್ರಿ ಬಳಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಸ್ಥಾವರದಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್ ಸರಬರಾಜು ಆಗಬೇಕಾಗಿದೆ ಎಂದರು.

ಇದರೊಂದಿಗೆ ಅವಳಿ ಜಿಲ್ಲೆಗಳಲ್ಲಿ ಯುವ ಜನತೆಗೆ ಉದ್ಯೋಗಾವಕಾಶ ದೊರೆಯುವಂತಾಗಲು ಕನಿಷ್ಠ ಪರಿಸರ ಮಾಲಿನ್ಯವುಳ್ಳ ಇಂಜಿನಿಯರಿಂಗ್, ಅಟೋಮೊಬೈಲ್, ಫಾರ್ಮಸ್ಯೂಟಿಕಲ್ ಉದ್ದಿಮೆಗಳು, ಐಟಿ ಪಾರ್ಕ್, ಇಲೆಕ್ಟ್ರೋನಿಕ್ಸ್ ಉದ್ಯಮಗಳನ್ನು ಪ್ರಾರಂಭಿಸುವಂತೆ ತಮ್ಮ ಸಂಸ್ಥೆ ಸರಕಾರವನ್ನು ಒತ್ತಾಯಿಸುವುದು ಎಂದರು.

ಕರಾವಳಿ ಕರ್ನಾಟಕದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಗೋವಾ ಹಾಗೂ ಕೇರಳ ರಾಜ್ಯಗಳಂತೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು, ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಮೂಲಭೂತ ಸೌಲಭ್ಯಗಳನ್ನು ಅಳವಡಿಸಬೇಕು ಎಂದು ಹೇಳಿದ ಅವರು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರನ್ನು ಭೇಟಿ ಮಾಡಿ ಮನವಿ ಅರ್ಪಿಸಲಾಗುವುದು ಎಂದರು.

ಅಲ್ಲದೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನದಿ ಹಾಗೂ ಸಮುದ್ರ ಮಾಲಿನ್ಯವನ್ನು ತಡೆಗಟ್ಟಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು. ಉಡುಪಿ ನಗರದೊಳಗೆ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಸುಮಾರು 10 ಎಕರೆ ಜಾಗವನ್ನು ಗುರುತಿಸಿ ಅದನ್ನು ಅಭಿವೃದ್ಧಿ ಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಪ್ರೊ.ಶಂಕರ್, ಕೆ.ಪಿ. ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್ ಡಿಸೋಜ, ರೋಲಾಂಡ್ ಸಾಲಿನ್ಸ್, ಪಿ.ಧನಂಜಯ ಶೆಟ್ಟಿ, ಸುರೇಂದ್ರ ಮೆಂಡನ್, ರವಿ ದೇವಾಡಿಗ, ಸುರೇಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News