ಟಿಪ್ಪುವಿನ ಕೊಡುಗೆಗಳನ್ನು ಎತ್ತಿಹಿಡಿಯದ ‘ಟಿಪ್ಪುಜಯಂತಿಯೆಂಬ ಪ್ರಹಸನ’
ಸರಕಾರ ಮಾಡುತ್ತಿರುವ ಟಿಪ್ಪುಜಯಂತಿ ಟಿಪ್ಪುನೀಡಿದ ಕೊಡುಗೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಅವುಗಳ ಪ್ರಾಮುಖ್ಯತೆಗಳನ್ನು ಮನನ ಮಾಡಿಸುವ ಯಾವ ಉದ್ದೇಶಗಳನ್ನೂ ಹೊಂದಿಲ್ಲದಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಅದು ಕೇವಲ ಓಟು ಸೀಟಿನ ಮಾಮೂಲಿ ಅಸಹ್ಯ ರಾಜಕೀಯ ವರಸೆ ಬಿಟ್ಟರೆ ಬೇರೇನಲ್ಲ. ಅದರಲ್ಲೂ ಟಿಪ್ಪುಜಯಂತಿಯನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೀಮಿತವಾಗುವಂತೆ ವ್ಯವಸ್ಥಿತವಾಗಿ ಮಾಡುತ್ತಿರುವುದು ಅಸಹ್ಯ ಮತ್ತು ಅಪಾಯಕಾರಿ ಕೂಡ. ಇದು ಬ್ರಾಹ್ಮಣಶಾಹಿ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳಿಗೆ ಹೊಸ ಪುರಾವೆಗಳೊಂದಿಗೆ ಅಸ್ತ್ರಗಳನ್ನು ಉಚಿತವಾಗಿ ನೀಡುವ ಕೆಲಸ ಬಿಟ್ಟರೆ ಬೇರೇನಲ್ಲ.
ಮತ್ತೊಂದು ಸರಕಾರಿ ಟಿಪ್ಪುಜಯಂತಿ ಕಳೆದು ಹೋಯಿತು. ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಟಿಪ್ಪುಜಯಂತಿಯ ಸರಕಾರಿ ಆಚರಣೆ ಸದ್ದು ಮಾಡುತ್ತಾ ಬರುತ್ತದೆ. ಕೊಡಗಿನಲ್ಲಿ ಬಂದ್ ಆಚರಣೆಗೂ ಕಾರಣವಾಗುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರಕಾರ ಟಿಪ್ಪುಜಯಂತಿ ಆಚರಣೆಯನ್ನು ಅಧಿಕೃತಗೊಳಿಸಿ ಸರಕಾರಿ ಆಚರಣೆಯನ್ನಾಗಿ ಮಾಡಿತ್ತು. ಅಲ್ಲದೆ ತನ್ನ ಅಲ್ಪಸಂಖ್ಯಾತ ಇಲಾಖೆಯ ಕಾರ್ಯಕ್ರಮವನ್ನಾಗಿ ಆಚರಿಸಲು ಶುರುಮಾಡಿತು. ಈ ಆಚರಣೆಗಳು ಶುರುವಾಗಿ ಈಗ ಮೂರು ವರ್ಷಗಳಾಗಿವೆ.
ಈ ಬಾರಿಯ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯ ಮಂತ್ರಿಗಳಿಬ್ಬರೂ ನೆಪ ಹೇಳಿ ನೇರ ಭಾಗವಹಿಸುವಿಕೆಯಿಂದ ತಪ್ಪಿಸಿಕೊಂಡರು. ಅದಕ್ಕೆ ಅವರದೇ ಆದ ರಾಜಕೀಯ ಲೆಕ್ಕಾಚಾರ ಮೂಢ ನಂಬಿಕೆಗಳು ಕಾರಣವೆಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನೂ ಇಲ್ಲ. ಅವೆಲ್ಲಾ ಅವರ ಜಾಯಮಾನವೆಂಬುದು ಬಹುತೇಕರಿಗೆ ತಿಳಿದಿರುವ ವಿಚಾರ ತಾನೆ.
ಸಂಘ ಪರಿವಾರದ ಬಿಜೆಪಿ ಇನ್ನಿತರ ಸಂಘಟನೆಗಳು ಟಿಪ್ಪು ಜಯಂತಿಯನ್ನು ವಿರೋಧಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿವೆ. ಇದಕ್ಕೆ ಟಿಪ್ಪು ಒಬ್ಬ ಮುಸ್ಲಿಂ ಹಿನ್ನೆಲೆಯ ರಾಜನಾಗಿದ್ದ, ಪುರೋಹಿತಶಾಹಿಯ ವಿರುದ್ಧವಾಗಿದ್ದ ಎಂಬುದೇ ಮುಖ್ಯ ಕಾರಣ. ಮುಸ್ಲಿಂ ದ್ವೇಷದ ಮೂಲಕವೇ ಪ್ರಧಾನವಾಗಿ ತನ್ನ ರಾಜಕೀಯವನ್ನು ಮಾಡುತ್ತಾ ಬಂದಿರುವ ಬಿಜೆಪಿ ಸಹಜವಾಗಿ ಟಿಪ್ಪುವನ್ನು ಒಬ್ಬ ಮತಾಂಧ, ಹಿಂದೂ ವಿರೋಧಿ, ಬಲವಂತವಾಗಿ ಮತಾಂತರ ಮಾಡಿದವ ಎಂದೆಲ್ಲಾ ಆರೋಪಗಳನ್ನು ಮಾಡುತ್ತಾ ಬಂದಿದೆ. ಇದಕ್ಕೆ ಚಿದಾನಂದ ಮೂರ್ತಿಯಂತಹ ಸಂಶೋಧಕರು ಹಾಗೆಯೇ ಎಸ್. ಎಲ್ ಭೈರಪ್ಪರಂತಹ ಸಾಹಿತಿಗಳ ದನಿಗಳೂ ಕೂಡ ಸೇರಿಕೊಂಡಿವೆ. ಟಿಪ್ಪುಭಾರತ ಕಂಡಂತಹ ಅಪರೂಪದ ರಾಜನಾಗಿದ್ದ ಎನ್ನುವುದು ಚರಿತ್ರೆ ನಮಗೆ ಹೇಳುತ್ತದೆ. ಹದಿನೆಂಟನೇ ಶತಮಾನದಲ್ಲಿ ಯೂರೋಪಿನಲ್ಲಿ ನಡೆಯುತ್ತಿದ್ದ ಕೈಗಾರಿಕಾ ಕ್ರಾಂತಿಯ ಪ್ರೇರಣೆ ಪಡೆದ ಒಬ್ಬ ರಾಜನಾಗಿದ್ದ ಟಿಪ್ಪು. ಯೂರೋಪಿನಲ್ಲಾಗುತ್ತಿದ್ದ ಸಾಮಾಜಿಕ ಬದಲಾವಣೆಯನ್ನು ಭಾರತದಲ್ಲೂ ತರಬೇಕು ಎಂಬ ಬಯಕೆ ಆತನಲ್ಲಿತ್ತು ಎನ್ನುವುದಕ್ಕೆ ಆತ ಮಾಡಿದ ಕಾರ್ಯಗಳೇ ಉದಾಹರಣೆಗಳಾಗಿವೆ. ಅದು ಭೂಮಾಲಿಕ ಪಾಳೆಗಾರರ ಹಿಡಿತವನ್ನು ತೊಲಗಿಸಿದ್ದು ಇರಬಹುದು. ಜೀತ ಪದ್ಧತಿಯನ್ನು ತೊಲಗಿಸಿ ಜೀತಗಾರರಿಗೆ ಭೂಹೀನರಿಗೆ ಭೂಮಿಗಳನ್ನು ಹಂಚಿದ್ದು ಇರಬಹುದು, ಕೃಷಿ ಹಾಗೂ ಕೈಗಾರಿಕಾ ಅಭಿವೃದ್ಧಿಗಳಿಗೆ ಮಹತ್ವ ಕೊಟ್ಟು ನೀರಾವರಿ ಮೊದಲಾದ ಸೌಲಭ್ಯಗಳನ್ನು ಮಾಡಿದ್ದು ಇರಬಹುದು, ಆಡಳಿತದಲ್ಲಿ ಆಧುನಿಕ ಸುಧಾರಣೆಗಳನ್ನು ತಂದು ಜನಪರ ವ್ಯವಸ್ಥೆಯೊಂದಕ್ಕೆ ನಾಂದಿ ಹಾಡಿದ್ದು ಇರಬಹುದು, ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ದಲಿತರನ್ನು ಸಬಲರನ್ನಾಗಿ ಮಾಡಲು ಕ್ರಮ ಕೈಗೊಂಡಿದ್ದು ಇರಬಹುದು, ಸರ್ವ ಜನರನ್ನು ಸಮಾನ ದೃಷ್ಟಿಯಿಂದ ನೋಡಬೇಕೆಂಬ ಆತನ ಚಿಂತನೆ ಇರಬಹುದು, ಮತೀಯ ಸಾಮರಸ್ಯಕ್ಕಾಗಿ ಆತ ಮಾಡಿದ ಕಾರ್ಯಗಳಿರಬಹುದು, ಶೃಂಗೇರಿ, ಕೊಲ್ಲೂರು ಸೇರಿದಂತೆ ಹಲವಾರು ದೇವಸ್ಥಾನಗಳಿಗೆ ರಕ್ಷಣೆ ಕೊಟ್ಟು ಆರ್ಥಿಕ ನೆರವು ನೀಡಿದ್ದು ಇರಬಹುದು ಹೀಗೆ ಹತ್ತು ಹಲವು ಉದಾಹರಣೆಗಳು ಇವೆ. ಇನ್ನು ಸಂಘ ಪರಿವಾರ ಆರೋಪಿಸುವಂತೆ ಬಲವಂತದ ಮತಾಂತರ ಆತನ ಕಾಲದಲ್ಲಿ ನಡೆಯುತ್ತದಾದರೂ ಅದರಲ್ಲಿ ಧಾರ್ಮಿಕ ಕಾರಣಕ್ಕಿಂತಲೂ ಸೈನಿಕ ಕಾರಣಗಳೇ ಮುಖ್ಯ ಕಾರಣ. ಯಾಕೆಂದರೆ ಬ್ರಿಟಿಷರ ಪರವಾಗಿರುವವರ ಮೇಲೆ ಏರಿಹೋಗುತ್ತಿದ್ದ ಟಿಪ್ಪುಸುಲ್ತಾನ್ ಅಲ್ಲಿ ಬಂಧಿಗಳಾಗಿ ಸಿಗುವವರಲ್ಲಿ ಹಲವರನ್ನು ಮತಾಂತರ ಮಾಡಿದ ಉದಾಹರಣೆ ಇದೆ. ಆದರೆ ಆ ಕಾಲದಲ್ಲಿ ಇತರ ರಾಜರಿಗೆ ಹೋಲಿಸಿದರೆ ಟಿಪ್ಪುಮತಾಂತರವನ್ನು ತನ್ನ ನೀತಿಯಾಗಿ ಹೊಂದಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಯಾಕೆಂದರೆ ಆಗಿನ ಕಾಲದಲ್ಲಿ ಹೆಚ್ಚು ಕಮ್ಮಿ ಎಲ್ಲಾ ರಾಜರುಗಳೂ ಯುದ್ಧಗಳಲ್ಲಿ ಸೋತ ಪ್ರದೇಶದ ಜನರನ್ನು ತಮ್ಮ ತಮ್ಮ ಧರ್ಮಗಳಿಗೆ ಮತಾಂತರ ಮಾಡಿಕೊಳ್ಳುವುದು ಮಾಮೂಲಿ ನೀತಿಯನ್ನಾಗಿ ಪಾಲಿಸುತ್ತಿದ್ದವರೇ ಹೆಚ್ಚಿನವರಾಗಿದ್ದರು. ಅದಕ್ಕೆ ಬೌದ್ಧ್ಧ, ಜೈನ, ಶೈವ, ಮಧ್ವ, ಅದ್ವೈತ, ವಿಶಿಷ್ಟಾದ್ವೈತ, ಇತ್ಯಾದಿ ಮತಪಂಥಗಳಲ್ಲಿ ಜನರು ಹಂಚಿಹೋಗಿರುವುದನ್ನು ನಾವು ಕಾಣುತ್ತೇವೆ. ಇವೆಲ್ಲಾ ಆಗಿನ ಕಾಲದ ಆಯಾ ರಾಜರ ಹಿತಾಸಕ್ತಿಯ ಮತಾಂತರಗಳೇ ಹೆಚ್ಚಿನವು. ಆದರೆ ಟಿಪ್ಪುವಿನ ವಿಚಾರಕ್ಕೆ ಬಂದರೆ ಆ ರೀತಿಯ ಮತಾಂತರ ನೀತಿಯನ್ನು ನಾವು ಕಾಣುವುದಿಲ್ಲ. ಟಿಪ್ಪುಆಗಿನ ಕಾಲದ ಜಗತ್ತಿನ ಪ್ರಗತಿಪರ ಧಾರೆಗೆ ಸೇರುವ ವ್ಯಕ್ತಿಯಾಗಿದ್ದ. ಸುಖಲೋಲುಪನಾಗದೇ ಅಬ್ಬರ ಆಡಂಬರಗಳಲ್ಲಿ ಮುಳುಗದೇ ಸರಳವಾಗಿ ಬದುಕಿ ತನ್ನ ಪ್ರಜೆಗಳ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಯೋಗಕ್ಷೇಮಕ್ಕಾಗಿ ಸಾಯುವವರೆಗೂ ಹೋರಾಡಿದ ಒಬ್ಬ ಅಪರೂಪದ ಜನಾನುರಾಗಿ ರಾಜನಾಗಿ ನಮಗೆ ಸ್ಪಷ್ಟವಾಗಿ ಗೋಚರಿಸುತ್ತಾನೆ. ಫ್ರೆಂಚರ ಜೊತೆಗೆ ಆತ ಸಂಪರ್ಕ ಹೊಂದಲು ಅಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಸಾಮಾಜಿಕ ಬದಲಾವಣೆಯ ಪ್ರೇರಣೆಯಿಂದ ಎನ್ನಬಹುದು. ಆತ ಅಲ್ಲಿ ನಡೆಯುತ್ತಿದ್ದ ಕೈಗಾರಿಕಾ ಕ್ರಾಂತಿಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದ. ಅಂದರೆ ಊಳಿಗಮಾನ್ಯ ವ್ಯವಸ್ಥೆಯ ಪತನ ಫ್ರಾನ್ಸ್‌ನಲ್ಲಿ ಆರಂಭವಾಗಿದ್ದನ್ನು ಒಬ್ಬ ರಾಜನಾಗಿ ಆಸಕ್ತಿ ಹೊಂದುವುದು ಸುಲಭದ ವಿಚಾರವಲ್ಲ. ಯಾಕೆಂದರೆ ರಾಜನೆಂದರೇನೇ ಪುರೋಹಿತ ಶಾಹಿ ಪಾಳೇಯಗಾರಿ ವ್ಯವಸ್ಥೆ ಆಧಾರಿತ ಊಳಿಗಮಾನ್ಯತೆಯ ಪ್ರತಿನಿಧಿ ತಾನೆ. ಹಾಗಾಗಿಯೇ ಟಿಪ್ಪುನಮಗೆ ವಿಶಿಷ್ಟ ವ್ಯಕ್ತಿಯಾಗಿ ಕಾಣಿಸುವುದು. ಅಂದರೆ ಟಿಪ್ಪು ಸುಲ್ತಾನ್ ಆ ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಪ್ರಗತಿಪರ ಬಂಡವಾಳಶಾಹಿ ಪ್ರಜಾಪ್ರಭುತ್ವದ ಬಗ್ಗೆ ಆಸಕ್ತಿ ಹೊಂದಿದ್ದ. ಇದು ಆತ ಮಾಡಿದ ಕೈಗಾರಿಕೀಕರಣ, ನೀರಾವರಿ ಕೆರೆ ಕಟ್ಟೆಗಳ ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧ್ಧಿಗಾಗಿ ಮಾಡಿದ ಅನ್ವೇಷಣೆ, ರೇಷ್ಮೆ ಕೃಷಿ ತಂದಿದ್ದು, ಹತ್ತಿ ಕೃಷಿಯನ್ನು ವಿಸ್ತೃತಗೊಳಿಸಿ ಹತ್ತಿಬಟ್ಟೆಯ ಅಭಿವೃದ್ಧಿ ಮಾಡಿದ್ದು, ಮಸ್ಲಿನ್ ಬಟ್ಟೆ ತಯಾರಿಸಿದ್ದು, ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಬೆಂಗಳೂರಿನ ಲಾಲ್ಬಾಗ್‌ನಂತಹ ಬೊಟಾನಿಕಲ್ ಗಾರ್ಡನ್‌ಗಳನ್ನು ಮಾಡಿದ್ದು, ಶ್ರೀಗಂಧದೆಣ್ಣೆ ಫ್ಯಾಕ್ಟರಿ ಸ್ಥಾಪನೆ, ಸೋಪು ತಯಾರಿಕಾ ಕಾರ್ಖಾನೆ ಇತ್ಯಾದಿಗಳಿಂದ ನಾವು ಗ್ರಹಿಸಬಹುದು. ಜೊತೆಗೆ ಸ್ಥಳೀಯ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿದ್ದ. ಅಷ್ಟೇ ಅಲ್ಲದೇ ಅಂತರ್‌ರಾಷ್ಟ್ರೀಯ ವ್ಯಾಪಾರವನ್ನು ಬೆಳೆಸಿ ಸ್ಥಳೀಯ ಉತ್ಪನ್ನಗಳಿಗೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯನ್ನು ಹುಟ್ಟುಹಾಕಿದ್ದಲ್ಲದೆ ಅದನ್ನು ರಕ್ಷಿಸುವ ನೀತಿಗಳನ್ನು ಜಾರಿಗೆ ತಂದ ಟಿಪ್ಪು,ಸ್ಥಳೀಯ ಉತ್ಪನ್ನಗಳಿಗೆ ಹಾನಿಯಾಗುವ ಆಮದುಗಳನ್ನು ತಡೆಹಿಡಿಯುತ್ತಿದ್ದ. ಬೇರೆಡೆಯಿಂದ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿರುತ್ತಿತ್ತು. ಸ್ಥಳೀಯ ಉತ್ಪಾದನೆಗಳ ಮೇಲಿನ ತೆರಿಗೆ ಕಡಿಮೆ ಇದ್ದು ಪ್ರೋತ್ಸಾಹದಾಯಕವಾಗಿರುತ್ತಿತ್ತು. ಅಲ್ಲದೆ ಸ್ಥಳೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸಲು ಕೊಡುಗೆಗಳನ್ನು ನೀಡುವ ಪದ್ಧತಿಯನ್ನು ಜಾರಿಗೆ ತಂದ. ಇದು ಈಗಿನ ಸರಕಾರಗಳ ಜಾಗತಿಕ ಕಾರ್ಪೊರೇಟ್ ಪರ ನೀತಿಗಳಿಗೆ ತದ್ವಿರುದ್ಧವಾದ ಜನಪರ ನೀತಿ.
ಪ್ರಗತಿಪರ ಕಂದಾಯ ನೀತಿಯನ್ನು ಅಭಿವೃದ್ಧಿಪಡಿಸಿ ಜಾರಿಗೊಳಿಸಿದ. ಜೊತೆಗೆ ಆಧುನಿಕ ಆಡಳಿತ ಸುಧಾರಣೆಗಳನ್ನು ತಂದು ಮಧ್ಯವರ್ತಿಗಳ ಹಿಡಿತವನ್ನು ತಪ್ಪಿಸಿ ರೈತರಿಗೆ ಆಗುತ್ತಿದ್ದ ಶೋಷಣೆ ತಪ್ಪಿಸಿದ್ದ. ಸ್ತ್ರೀಯರಿಗೆ ಆಗಿನ ಕಾಲದ ಕೇರಳದ ಭಾಗಗಳಲ್ಲಿ ರವಿಕೆ ತೊಡಲು ನಿರ್ಬಂಧ ಮತ್ತು ಮಗುವಿಗೆ ಹಾಲೂಡಿಸಲು ಮೊಲೆಗಂದಾಯ ವಿಧಿಸುತ್ತಿದ್ದ ಅನಿಷ್ಠ ಮತ್ತು ಹೇಯ ಪದ್ಧತಿಗಳಂತಹವನ್ನು ತೊಡೆದು ಹಾಕಿದ್ದ ಟಿಪ್ಪು ಸುಲ್ತಾನ್. ಹೀಗೆ ಟಿಪ್ಪುಆ ಕಾಲದ ಸಾಮಾಜಿಕ ಬದಲಾವಣೆಯ ಪ್ರತಿನಿಧಿಯಾಗಿ ಗೋಚರಿಸುವುದನ್ನು ನಿರಾಕರಿಸಲಾಗುವುದಿಲ್ಲ. ಈ ರೀತಿಯ ಜನಪರ ಹಾಗೂ ಅಭಿವೃದ್ಧಿಪರ ವೈಶಿಷ್ಟಗಳು ಭಾರತದ ಬೇರೆ ಯಾವ ರಾಜರಲ್ಲೂ ಕಾಣುವುದು ವಿರಳವೆಂದೇ ಹೇಳಬೇಕು. ಬ್ರಿಟಿಷ್ ವಸಾಹತುಗಳಿಗೆ ಬಲವಾಗಿ ತಡೆಯೊಡ್ಡಿ ದೇಶದಲ್ಲಿ ಪ್ರಜಾಪ್ರಭುತ್ವವಾದಿ ಬದಲಾವಣೆಗಳಿಗೆ ಅಡಿಪಾಯ ಹಾಕುತ್ತಿದ್ದ ಟಿಪ್ಪುಸುಲ್ತಾನ್. ರಾಷ್ಟ್ರ ಪ್ರೇಮವನ್ನು, ಸ್ವಾತಂತ್ರ್ಯ, ಸ್ವಾಭಿಮಾನದ ಹಂಬಲವನ್ನು ಬಿಟ್ಟುಕೊಡದೆ ಅದಕ್ಕಾಗಿಯೇ ಕೊನೆಯ ಉಸಿರಿನವರೆಗೂ ಮಕ್ಕಳು ಕುಟುಂಬವನ್ನು ತ್ಯಾಗ ಮಾಡಿ ಧೀರೋದಾತ್ತವಾಗಿ ಹೋರಾಡಿದ ಟಿಪ್ಪುಸುಲ್ತಾನ್‌ನಂತಹ ಬೇರೆ ಯಾವ ರಾಜನನ್ನೂ ನಾವು ಕಾಣಲು ಸಾಧ್ಯವಿಲ್ಲ. ಟಿಪ್ಪುಸುಲ್ತಾನನ ಸಾವು ಭಾರತದ ಸಾಮಾಜಿಕ ಅಭಿವೃದ್ಧಿಯ ಮೇಲೆ ಮಾರಣಾಂತಿಕ ಹೊಡೆತ ನೀಡಿತು ಎನ್ನುವುದು ಸ್ಪಷ್ಟ. ಯಾಕೆಂದರೆ ಅದು ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ಸದೃಢಗೊಳಿಸಿದ್ದಲ್ಲದೆ ಹಳೇ ಪ್ರಗತಿವಿರೋಧಿ ಊಳಿಗಮಾನ್ಯ ಶಕ್ತಿಗಳು ಪುನಶ್ಚೇತನಹೊಂದಲು ಕಾರಣವಾಯಿತು. ಬ್ರಿಟಿಷರು ಮೈಸೂರಿನ ಅರಸ ಸೇರಿದಂತೆ ಪಾಳೇಯಗಾರರನ್ನು ಹಾಗೂ ರಾಜರುಗಳನ್ನು ತಮ್ಮ ಸಾಮಂತರನ್ನಾಗಿ ಸ್ಥಾಪಿಸುತ್ತಾ ಇಡೀ ದೇಶದ ಮೇಲಿನ ತಮ್ಮ ಹಿಡಿತ ಬಿಗಿಗೊಳಿಸಲು ಸಾಧ್ಯ ಮಾಡಿತು. ಅಲ್ಲದೆ ಅಭಿವೃದ್ಧಿಯಾಗುತ್ತಿದ್ದ ಕೃಷಿ ಮತ್ತು ಸ್ಥಳೀಯ ಕೈಗಾರಿಕೆಗಳನ್ನು ಬ್ರಿಟಿಷ್ ಆಡಳಿತ ನಾಶಮಾಡಲು ತೊಡಗಿದ್ದು ಟಿಪ್ಪುವಿನ ಸಾವಿನ ನಂತರವೇ. ಇವೆಲ್ಲವನ್ನೂ ಒಟ್ಟಾಗಿ ನೋಡಿದಾಗ ಟಿಪ್ಪು ಸುಲ್ತಾನ್ ಕೊಡುಗೆಗಳು ಕನ್ನಡ ರಾಷ್ಟ್ರೀಯತೆಯ ಅಭಿವೃದ್ಧಿಯ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆಯುತ್ತವೆ. ಆದರೆ ಈಗ ಸರಕಾರ ಮಾಡುತ್ತಿರುವ ಟಿಪ್ಪುಜಯಂತಿ ಟಿಪ್ಪು ಸುಲ್ತಾನನು ನೀಡಿದ ಕೊಡುಗೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಅವುಗಳ ಪ್ರಾಮುಖ್ಯತೆಗಳನ್ನು ಮನನ ಮಾಡಿಸುವ ಯಾವ ಉದ್ದೇಶಗಳನ್ನೂ ಹೊಂದಿಲ್ಲದಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಅದು ಕೇವಲ ಓಟು ಸೀಟಿನ ಮಾಮೂಲಿ ಅಸಹ್ಯ ರಾಜಕೀಯ ವರಸೆ ಬಿಟ್ಟರೆ ಬೇರೇನಲ್ಲ. ಅದರಲ್ಲೂ ಟಿಪ್ಪುಜಯಂತಿಯನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಸೀಮಿತವಾಗುವಂತೆ ವ್ಯವಸ್ಥಿತವಾಗಿ ಮಾಡುತ್ತಿರುವುದು ಅಸಹ್ಯ ಮತ್ತು ಅಪಾಯಕಾರಿ ಕೂಡ. ಇದು ಬ್ರಾಹ್ಮಣಶಾಹಿ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳಿಗೆ ಹೊಸ ಪುರಾವೆಗಳೊಂದಿಗೆ ಅಸ್ತ್ರಗಳನ್ನು ಉಚಿತವಾಗಿ ನೀಡುವ ಕೆಲಸ ಬಿಟ್ಟರೆ ಬೇರೇನಲ್ಲ. ಸರಕಾರಿ ಕಾರ್ಯಕ್ರಮವನ್ನು ಸಮರ್ಥಿಸಿ ಬೆಂಬಲಿಸುತ್ತಿರುವ ವ್ಯಕ್ತಿಗಳು ಸಂಘಟನೆಗಳದೂ ಕೂಡ ಕೋಮುವಾದದ ವಿರುದ್ಧ ತಾವೆಂದು ಬಿಂಬಿಸುವ ಅಗ್ಗದ ತಂತ್ರಗಾರಿಕೆ ಮಾತ್ರ. ಯಾಕೆಂದರೆ ಇವರು ಕೋಮುವಾದವೆಂದರೆ ಕೇವಲ ಬಿಜೆಪಿ ಸಂಘ ಪರಿವಾರಕ್ಕೆ ಮಾತ್ರ ಸೀಮಿತವನ್ನಾಗಿ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿರುವುದು ಮೇಲ್ನೋಟದಲ್ಲೇ ಕಾಣಿಸುತ್ತಿದೆ. ಈ ಧೋರಣೆಗಳಿಂದ ಟಿಪ್ಪುಸೇರಿದಂತೆ ಯಾರದೇ ಜಯಂತಿಗಳನ್ನು ಸರಕಾರಗಳು ಆಚರಿಸಿದರೂ ಜನಸಾಮಾನ್ಯರ ದೃಷ್ಟಿಯಲ್ಲಿ ಉಪಯೋಗಕ್ಕಿಂತ ಅಪಾಯಗಳೇ ಜಾಸ್ತಿ. ಯಾಕೆಂದರೆ ಸಾಮಾನ್ಯವಾಗಿ ಆಳುವ ಸರಕಾರಗಳು ಟಿಪ್ಪುವಿನಂತಹ ವ್ಯಕ್ತಿತ್ವಗಳನ್ನು ಅವರ ಕೊಡುಗೆಗಳನ್ನು ಸಂಕುಚಿತಗೊಳಿಸಿ ಜನರಿಂದ ಮರೆಮಾಚುವ ಕೆಲಸವನ್ನೇ ಮಾಡುತ್ತವೆ. ಕೇವಲ ರಾಜಕೀಯ ಲಾಭವನ್ನಷ್ಟೇ ನೋಡುವ ಸರಕಾರಗಳ ಇಂತಹ ಆಚರಣೆಗಳ ಬದಲಾಗಿ ಜನಸಾಮಾನ್ಯರೇ ತಮ್ಮ ತಮ್ಮ ವಲಯಗಳಲ್ಲಿ ಇಂತಹ ವ್ಯಕ್ತಿತ್ವಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ಮಾಡುವಂತಾದಾಗಲೇ ಸಾಮಾಜಿಕವಾಗಿ ಉಪಯೋಗವಾಗುತ್ತದೆ.