ಮಂಗಳೂರಿನ ಪ್ರಥಮ ಸ್ಮಾರ್ಟ್‌ಡೋಪ್ ಎಕ್ಸ್‌ಟಿ ಸ್ವಯಂಚಾಲಿತ 6 ಡೋಪ್ಲರ್ ಯಂತ್ರ ಉದ್ಘಾಟನೆ

Update: 2018-11-13 14:26 GMT

ಮಂಗಳೂರು, ನ.13: ವಿಶ್ವ ಮಧುಮೇಹ ದಿನ ಪ್ರಯುಕ್ತ ಮುಕ್ಕ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ (ಎಸ್‌ಐಎಂಎಸ್-ಆರ್‌ಸಿ) ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಪ್ರಥಮ ಸ್ಮಾರ್ಟ್‌ಡೋಪ್ ಎಕ್ಸ್‌ಟಿ ಸ್ವಯಂಚಾಲಿತ 6 ಡೋಪ್ಲರ್ ನೂತನ ಯಂತ್ರವನ್ನು ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎ.ರಾಘವೇಂದ್ರ ರಾವ್ ಉದ್ಘಾಟಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್‌ಡೋಪ್ ಎಕ್ಸ್‌ಟಿ ಸ್ವಯಂಚಾಲಿತ 6 ಡೋಪ್ಲರ್ ಯಂತ್ರವು ಬಯೋಥೆಜಿ- ವಿಪಿಟಿ ಮತ್ತು ಪಿಒಡಿಪಿ ಐಮ್ಯಾಟನ್ನು ಹೊಂದಿದೆ. ಮಧುಮೇಹದ ಹೆಚ್ಚಿನ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದು ವರದಾನವಾಗಲಿದೆ. ಇದರಿಂದಾಗಿ ಕಾಲು ಆರೋಗ್ಯದ ಉತ್ತಮ ಚಿಕಿತ್ಸೆ ಮತ್ತು ನಿರ್ವಹಣೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ವಿಶ್ವ ಮಧುಮೇಹ ದಿನದ ಅಂಗವಾಗಿ ಆಸ್ಪತ್ರೆಯಲ್ಲಿ ನ.14ರಿಂದ 20ರವರೆಗೆ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದಲ್ಲಿ ಒಂದು ವಾರ ಕಾಲ ಮಧುಮೇಹ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ನ.20ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಶ್ರೀನಿವಾಸ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಶ್ರೀನಿವಾಸ ಆರೋಗ್ಯ ಕಾರ್ಡ್‌ನ್ನು ಶಿಬಿರದ ಅವಧಿಯಲ್ಲಿ ವಿತರಿಸಲಾಗುವುದು. ಶಿಬಿರದಲ್ಲಿ ತಜ್ಞ ವೈದ್ಯರಿಂದ ಉಚಿತ ತಪಾಸಣೆ, ಸಲಹೆ ದೊರೆಯಲಿದೆ. ನೇತ್ರ ಚಿಕಿತ್ಸೆ, ಫಿಸಿಯೊಥೆರಫಿ, ಲ್ಯಾಬ್ ಸಂಬಂಧಿತ ತಪಾಸಣೆಗಳು, ಅಗತ್ಯವಿದ್ದರೆ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರಿಗೆ ಗರಿಷ್ಠ ರಿಯಾಯಿತಿ ದೊರೆಯಲಿದೆ ಎಂದು ಹೇಳಿದರು.

ಮಧುಮೇಹವನ್ನು ಗಂಭೀರವಾಗಿ ಪರಿಗಣಿಸಬೇಕು. ಮಧುಮೇಹ ರೋಗದಿಂದ ಆಗುವ ಹೆಚ್ಚಿನ ಅಪಾಯವನ್ನು ತಪ್ಪಿಸಬೇಕು. ಈ ರೋಗವನ್ನು ಬಗೆಹರಿಸಲು ತರಬೇತಿ ಪಡೆದ ಮಧುಮೇಹ ಶಾಸ್ತ್ರಜ್ಞ, ಪಾದದ ಆರೈಕೆಯ ಸೂಪರ್ ತಜ್ಞ ಮತ್ತು ಭೌತ ಚಿಕಿತ್ಸೆಯ ಕೇಂದ್ರದೊಂದಿಗೆ ಶ್ರೀನಿವಾಸ ಆಸ್ಪತ್ರೆ ಸಜ್ಜುಗೊಂಡಿದೆ. ನ.15ರಿಂದ ಕಾಡಿರ್ಯಾಲಜಿ ವಿಭಾಗವನ್ನು ಆರಂಭಿಸಲಾಗುವುದು ಎಂದರು.

ಎ.ಶಾಮರಾವ್ ಪ್ರತಿಷ್ಠಾನದಿಂದ ಪ್ರಾಯೋಜಿಸಿರುವ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳ ದಾಖಲೆಯನ್ನು ಹೊಂದಿದೆ. ಪ್ರತಿಷ್ಠಾನದ ಅಧ್ಯಕ್ಷ ಎ.ರಾಘವೇಂದ್ರ ರಾವ್ ನೇತೃತ್ವದಲ್ಲಿ, ಎ.ಶ್ರೀನಿವಾಸ್ ರಾವ್ ಬೆಂಬಲದೊಂದಿಗೆ ವೃತ್ತಿಪರ ಕಾಲೇಜು ಸೇರಿದಂತೆ 14 ಖ್ಯಾತ ಶೈಕ್ಷಣಿಕ ಸಂಸ್ಥೆಗಳ ಸರಣಿಯನ್ನು ಹೊಂದಿದೆ. ಜನತೆ ಗುಣಮಟ್ಟದ ಶಿಕ್ಷಣದ ಜತೆಗೆ ಆಧುನಿಕ ಸೌಲಭ್ಯದೊಂದಿಗೆ ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.

ಭಾತರದಲ್ಲಿ 65 ಮಿಲಿಯನ್ ಮಧುಮೇಹಿಗಳು

ವಿಶ್ವದೆಲ್ಲೆಡೆ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಭಾರತ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು 65.1 ಮಿಲಿಯನ್‌ನಷ್ಟು ಮಧುಮೇಹ ರೋಗಿಗಳಿದ್ದಾರೆ. ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತದಲ್ಲಿಯೇ ಕರ್ನಾಟಕ ರಾಜ್ಯ ಆರನೇ ಸ್ಥಾನದಲ್ಲಿದ್ದು, ಮಧುಮೇಹ ರೋಗದತ್ತ ಸಾಗುವ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ಆಘಾತಕಾರಿಯಾಗಿದೆ ಎಂದು ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎ.ರಾಘವೇಂದ್ರ ರಾವ್ ತಿಳಿಸಿದರು.

ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸುನೀಲ್‌ ಕುಮಾರ್ ಮಾತನಾಡಿ, ಮಧುಮೇಹದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಶ್ರೀನಿವಾಸ ಆಸ್ಪತ್ರೆ ಮಾಡಲಿದ್ದು, ಈ ಕುರಿತ ವಾರದ ಶಿಬಿರವನ್ನೂ ಹಮ್ಮಿಕೊಳ್ಳಲಿದೆ. ಚಿಕಿತ್ಸೆಯಲ್ಲಿ ರಿಯಾಯಿತಿ ದೊರೆಯಲಿದೆ. ಮಧುಮೇಹದಲ್ಲಿ ಎಲ್ಲ ವಿಧದ ರೋಗಗಳನ್ನು ನಿಯಂತ್ರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎ.ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಎ.ಶ್ರೀನಿವಾಸ್ ರಾವ್, ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಡೀನ್ ಡಾ.ಉದಯ ಕುಮಾರ್, ರಿಜಿಸ್ಟ್ರಾರ್ ಡಾ.ಅನಿಲ್‌ ಕುಮಾರ್, ಕ್ಲಾಸಿಕ್ ಸರ್ಜನ್ ಡಾ. ಆದಿಲ್, ಡಾ.ಮುಹಮ್ಮದ್ ಆರಿಫ್, ಡಾ. ಅನಿತಾ, ಡಾ. ಅಣ್ಣಯ್ಯ ಕುಲಾಲ್, ಡಾ. ಅರ್ಪಣಾ, ಡಾ.ರಾಯುಡು ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News