ನ.14ರಂದು ಕೆಎಂಸಿ ಮಣಿಪಾಲದಿಂದ ಉಚಿತ ಮಧುಮೇಹ ತಪಾಸಣೆ

Update: 2018-11-13 14:42 GMT

ಮಣಿಪಾಲ, ನ.13: ಇಂದು ವಿಶ್ವದಾದ್ಯಂತ ಅತಿ ಹೆಚ್ಚು ಚರ್ಚೆಗೊಳಗಾ ಗುವ ರೋಗವೆಂದರೆ ಮಧುಮೇಹ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಇಂಟರ್‌ನೇಷನಲ್ ಡಯಾಬಿಟಿಸ್ ಫೆಡರೇಷನ್) ವರದಿಯ ಪ್ರಕಾರ, ವಿಶ್ವದಲ್ಲೇ ಅತ್ಯಂತ ಹೆಚ್ಚು ಮಧುಮೇಹ ರೋಗಿಗಳಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಸುಮಾರು 70 ದಶಲಕ್ಷ ಜನರಿಗೆ ಭಾರತದಲ್ಲಿ ಮಧುಮೇಹವಿದೆ.

2030ರ ಸುಮಾರು ಇದು ದ್ವಿಗುಣಗೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಪ್ರತೀ ವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಕೆಎಂಸಿ ಮಣಿಪಾಲದ ಎಂಡೋಕ್ರೈನಾಲಜಿ ವಿಭಾಗ, ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ ಮತ್ತು ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಸಂಯುಕ್ತವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ನಾಳೆ ಬೆಳಗ್ಗೆ 6:30ರಿಂದ 10 ರವರೆಗೆ ಆಯೋಜಿಸಿದೆ.

ಕೆಎಂಸಿ ಮಣಿಪಾಲದ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ನಡೆಯುವ ಈ ಉಚಿತ ಮಧುಮೇಹ ತಪಾಸಣಾ ಶಿಬಿರದಲ್ಲಿ ಜನರಿಗೆ ಮಧುಮೇಹಕ್ಕಾಗಿ ಉಚಿತ ತಪಾಸಣೆ ನಡೆಸಲಾಗುವುದಲ್ಲದೇ, ಈ ಕುರಿತು ಜಾಗೃತಿಯನ್ನು ಮೂಡಿಸಲಾಗುವುದು ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ಬೆಳಗ್ಗೆ 6:30ರಿಂದ 10 ರವರೆಗೆ ಮಣಿಪಾಲದ ಟ್ಯಾಕ್ಸಿ ನಿಲ್ದಾಣದ ಬಳಿ, ಸಿಟಿ ಬಸ್ ನಿಲ್ದಾಣದ ಹಿಂದೆ, ಉಡುಪಿಯ ಬೋರ್ಡ್ ಹೈಸ್ಕೂಲ್, ಸರ್ವೀಸ್ ಬಸ್ ನಿಲ್ದಾಣದ ಎದುರು, ಬ್ರಹ್ಮಾವರದ ಬಸ್ ನಿಲ್ದಾಣದ ಬಳಿ, ಟ್ಯಾಕ್ಸಿ ನಿಲ್ದಾಣದ ಎದುರು, ಕುಂದಾಪುರದ ತಾಲೂಕು ಕಚೇರಿಯ ಬಳಿ, ಶಾಸ್ತ್ರಿ ವೃತ್ತ ಹಾಗೂ ಡಾ.ಟಿಎಂಎ ಪೈ ಆಸ್ಪತ್ರೆ ಉಡುಪಿ ಮತ್ತು ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ತಪಾಸಣಾ ಶಿಬಿರಗಳನ್ನು ನಡೆಸಲಿದ್ದೇವೆ ಎಂದರು. ಈ ತಪಾಸಣೆಯು ಉಡುಪಿಯ ಕೊಂಕಣ್ ರೈಲ್ವೇ ನಿಲ್ದಾಣದಲ್ಲಿ ಸಹ ಬೆಳಗ್ಗೆ 7:30ರಿಂದ 11ರವರೆಗೆ ಲಭ್ಯವಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯ ಕೇಂದ್ರ (0820-2922761) ಅಥವಾ ಮಾರ್ಕೆಟಿಂಗ್ ವಿಭಾಗವನ್ನು (0820-2922638/22316/22319) ಸಂಪರ್ಕಿಸುವಂತೆ ಡಾ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News