ಜನರ ಸಮಸ್ಯೆಗಳನ್ನು ಶಾಸಕಾಂಗ ಸಭೆಯಲ್ಲಿ ಸಮರ್ಥವಾಗಿ ಪ್ರತಿನಿಧಿಸಿದ ತೃಪ್ತಿ ಇದೆ: ಐವನ್ ಡಿಸೋಜ

Update: 2018-11-13 14:56 GMT

ಮಂಗಳೂರು, ನ.13: ಸಂಸದೀಯ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತದೊಂದಿಗೆ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಮತ್ತು ಈ ಅವಕಾಶವನ್ನು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಶಾಸಕಾಂಗ ಸಭೆಯನ್ನು ಬಳಸಿಕೊಂಡಿದ್ದೇನೆ .ಅದನ್ನು ಜನರು ನೆನಪಿಸಿಕೊಂಡು ಕೃತಜ್ಞತೆ ವ್ಯಕ್ತಪಡಿಸುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ತಿಳಿಸಿದರು.

ಅವರು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ಶಾಸಕನಾಗಿ 4 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ‘ಈಜಿ ಜಯಿಸುವ ಛಲ ’ಎಂಬ ತನ್ನ ನಾಲ್ಕು ವರ್ಷಗಳ ಅವಧಿಯ ಸಾಧನೆಯ ದಾಖಲಿಸಿರುವ ಪುಸ್ತಕದ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಳೆದ ನಾಲ್ಕು ವರ್ಷಗಳಲ್ಲಿ ವಿಧಾನ ಪರಿಷತ್ ಸಭೆಯಲ್ಲಿ ಶಾಸಕನಾಗಿ ಮತ್ತು ಮುಖ್ಯ ಸಚೇತಕನಾಗಿ ಕಾರ್ಯನಿರ್ವಹಿಸುವಾಗ ಸಾಕಷ್ಟು ಜನರ ಸಮಸ್ಯೆ ಯನ್ನು ಶಾಸಕಾಂಗ ಸಭೆಯಲ್ಲಿ ಮಂಡಿಸಿ ಅದಕ್ಕೆ ಉತ್ತರವನ್ನು ಪಡೆಯುವುದರೊಂದಿಗೆ ಆಡಳಿತ ವ್ಯವಸ್ಥೆಯ ಮೂಲಕ ಜನರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಿದೆ. ಹಲವು ಸಮಸ್ಯೆಗಳ ಪರಿಹಾರಕ್ಕೆ ಕಾನೂನು ತಿದ್ದುಪಡಿ, ಹೊಸ ಯೋಜನೆಗಳು ರೂಪುಗೊಂಡಿರುವುದು ನನಗೆ ತೃಪ್ತಿ ನೀಡಿದೆ.

ಉದಾಹರಣೆಗೆ ಸರಕಾರ ಒಂದು ರೂಪಾಯಿಗೆ ಅಕ್ಕಿ ನೀಡುವ ಪ್ರಸ್ತಾಪ ಮಾಡಿದಾಗ ಅದರ ದಾಖಲೆ ನೀಡಲು ಒಟ್ಟು ನಾಲ್ಕು ರೂಪಾಯಿ ಆಗುತ್ತದೆ. ಅದರಿಂದ ಉಚಿತ ಅಕ್ಕಿ ವಿತರಣೆ ಉತ್ತಮ ಎಂದು ಸಲಹೆ ನೀಡಿರುವುದನ್ನು ಸರಕಾರ ಪರಿಗಣಿಸಿತು. ಸರಕಾರದ ಬೊಕ್ಕಸಕ್ಕೆ ಲಾಭವಾಯಿತು. ಜನರಿಗೂ ಉಚಿತ ಅಕ್ಕಿ ದೊರೆಯಿತು. ಇಂದಿರಾ ಕ್ಯಾಂಟೀನ್ ಜಾರಿ ಮಾಡುವ ಮೊದಲು ತಮಿಳುನಾಡಿನ ಅಮ್ಮ ಕ್ಯಾಂಟೀನ್ ಬಗ್ಗೆ ಅಧ್ಯಯನ ಮಾಡಿ ಅದನ್ನು ರಾಜ್ಯಕ್ಕೆ ಶಿಫಾರಸು ಮಾಡಿದ ಬಳಿಕ ಆ ಯೋಜನೆ ಜಾರಿಯಾಗಿ, ಜನರಿಗೆ ಪ್ರಯೋಜನವಾಗುತ್ತಿರುವುದು ಕಂಡಾಗ ನನಗೆ ಸಂತೋಷವಾಯಿತು. ಇದೆ ರೀತಿ ಹಲವು ಸಮಸ್ಯೆಗಳು ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಯಿತು ಎಂದು ಐವನ್ ಡಿ ಸೋಜ ತಮ್ಮಅನುಭವವನ್ನು ಹಂಚಿಕೊಂಡರು.

ಸಿಎಂ ಪರಿಹಾರ ನಿಧಿಯಿಂದ ಗರಿಷ್ಠ ಪರಿಹಾರ, ಅಧಿವೇಶನದಲ್ಲಿ ಶೇ 100 ಹಾಜರಾತಿ

ಶಾಸಕನಾಗಿ ನಾಲ್ಕು ವರ್ಷದ ಅವಧಿಯಲ್ಲಿ ಸಿಎಂ ಪರಿಹಾರ ನಿಧಿಯಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿರುವವರ ಅರ್ಜಿಗಳನ್ನು ಸ್ವೀಕರಿಸಿ 6 ಕೋಟಿ ಗೂ. ಅಧಿಕ ಪರಿಹಾರದ ನೆರವನ್ನು ಸುಮಾರು 5 ಸಾವಿರಕ್ಕೂ ಅಧಿಕ ಮಂದಿಗೆ ಒದಗಿಸಲು ಸಾಧ್ಯವಾಗಿರುವುದು ರಾಜ್ಯದಲ್ಲಿಯೇ ಗರಿಷ್ಠ ಸಾಧನೆಯಾಗಿದೆ. ಇದನ್ನು ಮುಂದುವರಿಸಬೇಕು ಎನ್ನುವ ಆಶಯ ಇದೆ ಎಂದು ಐವನ್ ಡಿ ಸೋಜ ತಿಳಿಸಿದರು.

ಪುಸ್ತಕವನ್ನು ಬಿಡುಗಡೆಗೊಳಿಸಿದ ಪ್ರೊ. ನರಹರಿ ಮಾತನಾಡುತ್ತಾ, ಐವನ್ ಒಬ್ಬ ಕ್ರೀಯಾಶೀಲ ನಾಯಕ ಹೇಗಿರಬೇಕು ಎನ್ನುವುದಕ್ಕೆ ಮಾದರಿ ಎಂದರು. ಅಭಿವೃದ್ಧಿಯ ವಿಚಾರದಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡ ನಾಯಕ ಎಂದು ಅವರು ಶ್ಲಾಘಿಸಿದರು.

ಮುಖ್ಯ ಅತಿಥಿ ಡಾ. ವಾಸುದೇವ ಬೆಳ್ಳೆ ಮಾತನಾಡುತ್ತಾ, ಐವನ್ ತಾವು ಇರುವ ಪ್ರದೇಶದ ವಿವಿಧ ಜಾತಿ, ಮತ, ಧರ್ಮದ ರೀತಿ ನೀತಿಗಳ ಬಗ್ಗೆ ಗೌರವ ಹೊಂದಿದ್ದ ಮತ್ತು ಈ ಬಗ್ಗೆ ಅರಿವಿದ್ದ ವ್ಯಕ್ತಿಯಾಗಿದ್ದು ಎಲ್ಲರನ್ನು ಸಮಾನವಾಗಿ ಕಾಣುವ ಮನೋಭಾವ ಇತ್ತು ಆ ಕಾರಣದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಅವರು ವಿವರಿಸಿದರು.

ಸಮಾರಂಭದಲ್ಲಿ ಮನಪಾ ಮೇಯರ್ ಭಾಸ್ಕರ ಕೆ, ಉಪ ಮೇಯರ್ ಮಹಮ್ಮದ್ ಕೆ, ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಡಾ. ಜನಾರ್ದನ, ಡಾ. ಕವಿತಾ ಮೊದಲಾದವರು ಉಪಸ್ಥಿತರಿದ್ದರು. ನಾಗೇಂದ್ರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News