‘ಕೆಲಸ ಆಯಿತು, ನಿಮ್ಮ ಬಾಸ್‌ಗೆ ಹೇಳಿ’

Update: 2018-11-13 15:09 GMT

ನ್ಯೂಯಾರ್ಕ್, ನ. 13: ಕಳೆದ ತಿಂಗಳು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯ ಕೌನ್ಸುಲೇಟ್ ಕಚೇರಿಯಲ್ಲಿ ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯನ್ನು ಕೊಂದ ಬಳಿಕ, ಹಂತಕ ತಂಡದ ಓರ್ವ ಸದಸ್ಯನು, ಏಜಂಟ್‌ಗಳು ತಮ್ಮ ಕೆಲಸ ಮುಗಿಸಿದ್ದಾರೆ ಎಂಬುದಾಗಿ ‘ನಿಮ್ಮ ಬಾಸ್‌ಗೆ ಹೇಳಿ’ ಎಂದು ಫೋನ್‌ನಲ್ಲಿ ಹೇಳಿದ್ದನು.

ಈ ವಿಷಯವನ್ನು ಟರ್ಕಿ ಗುಪ್ತಚರ ಸಂಸ್ಥೆಯು ಸಂಗ್ರಹಿಸಿದ ಖಶೋಗಿ ಹತ್ಯೆಯ ಧ್ವನಿಮುದ್ರಣವನ್ನು ಕೇಳಿರುವ ಮೂವರು ವ್ಯಕ್ತಿಗಳು ಹೇಳಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಹತ್ಯಾ ತಂಡದ ಸದಸ್ಯನು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ‘ಬಾಸ್’ ಎಂಬುದಾಗಿ ಪ್ರಸ್ತಾಪಿಸಿದ್ದಾನೆ ಎಂದು ಭಾವಿಸಲಾಗಿದೆ.

ಈ ಧ್ವನಿಮುದ್ರಣವನ್ನು ಟರ್ಕಿಯು ಕಳೆದ ತಿಂಗಳು ಸಿಐಎ ನಿರ್ದೇಶಕಿ ಗಿನಾ ಹ್ಯಾಸ್ಪೆಲ್‌ಗೆ ನೀಡಿದೆ. ಇದು ಖಶೋಗಿ ಹತ್ಯೆಗೂ ಸೌದಿ ಯುವರಾಜನಿಗೂ ನಂಟು ಕಲ್ಪಿಸುವ ಅತ್ಯಂತ ಬಲವಾದ ಪುರಾವೆ ಎಂಬುದಾಗಿ ಗುಪ್ತಚರ ಅಧಿಕಾರಿಗಳು ಭಾವಿಸಿದ್ದಾರೆ.

ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಟೀಕಾಕಾರರಾಗಿದ್ದ ಖಶೋಗಿ ಸೌದಿ ತೊರೆದು ಅಮೆರಿಕದ ವರ್ಜೀನಿಯದಲ್ಲಿ ವಾಸಿಸುತ್ತಿದ್ದರು ಹಾಗೂ ‘ವಾಶಿಂಗ್ಟನ್ ಪೋಸ್ಟ್’ಗೆ ಅಂಕಣಗಳನ್ನು ಬರೆಯುತ್ತಿದ್ದರು.

ಧ್ವನಿಮುದ್ರಿಕೆಯಲ್ಲಿ ಮುಹಮ್ಮದ್ ಬಿನ್ ಸಲ್ಮಾನ್‌ರ ಹೆಸರು ಹೇಳಿಲ್ಲವಾದರೂ, ನಿಮ್ಮ ಬಾಸ್ ಎಂಬುದಾಗಿ ಅವರನ್ನು ಉದ್ದೇಶಿಸಿ ಹೇಳಲಾಗಿದೆ ಎಂಬುದಾಗಿ ಅಮೆರಿಕದ ಗುಪ್ತಚರ ಅಧಿಕಾರಿಗಳು ಭಾವಿಸಿದ್ದಾರೆ.

ಸೌದಿ ತಂಡದ ಲಗೇಜ್‌ನಲ್ಲಿ ವಿದ್ಯುತ್ ಶಾಕ್ ಉಪಕರಣ, ಕತ್ತರಿ, ಸಿರಿಂಜ್

ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಬಂದ 15 ಸದಸ್ಯರ ಸೌದಿ ತಂಡ ತೆಗೆದುಕೊಂಡು ಬಂದಿದ್ದ ಲಗೇಜ್‌ನಲ್ಲಿ ಕತ್ತರಿಗಳು, ಡೀಫೈಬ್ರಿಲೇಟರ್ (ಹೃದಯದ ಅಸಹಜ ಬಡಿತವನ್ನು ಸರಿಪಡಿಸಲು ವಿದ್ಯುತ್ ಆಘಾತ ಕೊಡುವ ಉಪಕರಣ) ಮತ್ತು ಸಿರಿಂಜ್‌ಗಳಿದ್ದವು ಹಾಗೂ ಅವುಗಳನ್ನು ಜಮಾಲ್ ಖಶೋಗಿ ಹತ್ಯೆಯಲ್ಲಿ ಬಳಸಿರಬಹುದು ಎಂದು ಟರ್ಕಿಯ ಪತ್ರಿಕೆ ‘ಸಬಾ’ ವರದಿ ಮಾಡಿದೆ.

ಲಗೇಜ್‌ನ ಎಕ್ಸ್-ರೇ ಚಿತ್ರಗಳನ್ನು ಪತ್ರಿಕೆ ಮಂಗಳವಾರ ಪ್ರಕಟಿಸಿದೆ.

ಟರ್ಕಿಯ ಗೆಳತಿಯನ್ನು ಮದುವೆಯಾಗುವುದಕ್ಕಾಗಿ ದಾಖಲೆ ಪತ್ರಗಳನ್ನು ತರಲು ಖಶೋಗಿ ಅಕ್ಟೋಬರ್ 2ರಂದು ಕೌನ್ಸುಲೇಟ್ ಕಚೇರಿಗೆ ಹೋಗಿದ್ದರು.

ಅವರು ಕಚೇರಿ ಪ್ರವೇಶಿಸಿದ ಕೂಡಲೇ ಹಂತಕರು ಅವರ ಕುತ್ತಿಗೆ ಹಿಸುಕಿ ಕೊಂದು ದೇಹವನ್ನು ಚೂರು ಚೂರಾಗಿ ಕತ್ತರಿಸಿದ್ದರೆ ಎಂದು ಟರ್ಕಿ ಪ್ರಾಸಿಕ್ಯೂಟರ್ ಒಬ್ಬರು ಹೇಳಿದ್ದಾರೆ.

ಲಗೇಜ್‌ನಲ್ಲಿ 10 ಫೋನ್‌ಗಳು, 5 ವಾಕಿ-ಟಾಕಿಗಳು, ಇಂಟರ್‌ಕಾಮ್‌ಗಳು, 2 ಸಿರಿಂಜ್‌ಗಳು, 2 ಡೀಫೈಬ್ರಿಲೇಟರ್‌ಗಳು, ಒಂದು ಜಾಮಿಂಗ್ (ನೆಟ್‌ವರ್ಕ್ ಸ್ಥಗಿತಗೊಳಿಸುವ) ಉಪಕರಣ, ಸ್ಟಾಪ್ಲರ್‌ಗಳು ಮತ್ತು ಕತ್ತರಿಗಳಿದ್ದವು ಎಂದು ಪತ್ರಿಕೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News