ಗ್ರಾಮಸ್ಥರಿಗೆ ಮಾಹಿತಿ ನೀಡದ ಪಾದೂರು: 2ನೆ ಹಂತದ ಪೈಪ್‌ಲೈನ್ ಕಾಮಗಾರಿಗೆ ವಿರೋಧ

Update: 2018-11-13 16:51 GMT

ಉಡುಪಿ, ನ.13: ಪಾದೂರು ಐಎಸ್‌ಪಿಆರ್‌ಎಲ್ ಮೊದಲನೆ ಹಂತದ ಕಚ್ಛಾ ತೈಲ ಪೈಪ್‌ಲೈನ್ ಕಾಮಗಾರಿಯ ಸಂತ್ರಸ್ತರಿಗೆ ಪರಿಹಾರ ನೀಡದೆ ಹಾಗೂ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಿದೆ ಎರಡನೆ ಹಂತದ ಪೈಪ್‌ಲೈನ್ ಕಾಮಗಾರಿಯನ್ನು ಆರಂಭಿಸಬಾರದು. ಸರಕಾರ ಇದನ್ನು ಪಾಲಿಸದಿದ್ದರೆ ಮುಂದೆ ಸಂತ್ರಸ್ತ 24 ಗ್ರಾಮಗಳ ಗ್ರಾಮಸ್ಥರೊಂದಿಗೆ ಸೇರಿ ಹೋರಾಟ ನಡೆಸ ಲಾಗುವುದು ಎಂದು ಮಾಹಿತಿ ಸೇವಾ ಸಮಿತಿಯ ಕರ್ನಾಟಕ ರಾಜ್ಯಾಧ್ಯಕ್ಷ ಜಿ.ಎ.ಕೋಟಿಯಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೆ ಹಂತದ ಪೈಪ್‌ಲೈನ್ ಕಾಮಗಾರಿಯು ಪಾದೂರು, ಕಳ್ತೂರು, ತೋಕೂರು, ಚಂದ್ರ ನಗರ ಸೇರಿದಂತೆ 24 ಗ್ರಾಮಗಳಲ್ಲಿ ಹಾದುಹೋಗಲಿದ್ದು, ಇದರಿಂದ ಈ ಗ್ರಾಮಗಳ ಬಡ ಜನತೆ ಭೂಮಿ ಹಾಗೂ ಮನೆಗಳನ್ನು ಕಳೆದುಕೊಳ್ಳಲಿ ದ್ದಾರೆ. ಈ ಹಿಂದೆ ಮೊದಲನೆ ಹಂತದ ಕಾಮಗಾರಿಯಲ್ಲಿ ಜಾಗ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರಕಾರ ಯಾವುದೇ ಪರಿಹಾರ ನೀಡಿಲ್ಲ ಎಂದು ದೂರಿದರು.

ಈ ಎರಡನೆ ಹಂತದ ಪೈಪ್‌ಲೈನ್‌ಗಳ ಕಾಮಗಾರಿ ಆರಂಭಿಸುವ ಮೊದಲು ಸರಿಯಾದ ನಕ್ಷೆಯನ್ನು ಜನರ ಮುಂದೆ ಇಟ್ಟು, ಸರಿಯಾದ ಮಾಹಿತಿಯನ್ನು ನೀಡಬೇಕು. ಅವರಿಗೆ ನೀಡುವ ಪರಿಹಾರ ಧನದ ಮೊತ್ತವನ್ನು 90 ದಿನಗಳ ಒಳಗೆ ಮಾಧ್ಯಮದ ಮೂಲಕ ತಿಳಿಸಬೇಕು. ಅಲ್ಲದೆ ಸರಕಾರಿ ಗಜೆಟ್‌ನಲ್ಲಿ ಸೂಚಿಸಬೇಕು ಎಂದರು.

ಪೈಪ್‌ಲೈನ್ ಕಾಮಗಾರಿ ಕುರಿತ ವಿವಿಧ ಬೇಡಿಕೆಗಳ ಪತ್ರವನ್ನು ಸಮಿತಿಯು ಅ.5ರಂದು ಮುಖ್ಯಮಂತ್ರಿಗಳಿಗೆ ಬರೆದಿದ್ದು, ಇವುಗಳ ಕುರಿತು ಕ್ರಮ ಕೈಗೊಂಡ ಬಗ್ಗೆ ಸಮಿತಿಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಜಿಲ್ಲಾಡಳಿತ ಈವರೆಗೆ ಈ ಕುರಿತು ಯಾವುದೇ ಮಾಹಿತಿಯನ್ನು ಸಮಿತಿಗೆ ನೀಡಿಲ್ಲ ಎಂದು ಅವರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾಪು ಮಹಿಳಾ ಪ್ರತಿನಿಧಿ ಐರಿನ್ ಥಾವ್ರೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News