ನ. 14: ಸೆಡ್ಸ್‌ನಿಂದ ಕೇರ್ ಚೈಲ್ಡ್ ಕ್ಯಾನ್ಸರ್ ವೆಬ್‌ಸೈಟ್ ಬಿಡುಗಡೆ

Update: 2018-11-13 17:11 GMT

ಮಂಗಳೂರು, ನ.13: ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಸ್ಟಡೀಸ್ ಆ್ಯಂಡ್ ಎಜುಕೇಶನ್ (ಸೆಡ್ಸ್)ನಿಂದ ನ.14ರಂದು ಬೆಳಗ್ಗೆ 10 ಗಂಟೆಗೆ ನಗರದ ಸ್ಕೂಲ್ ಆಫ್ ಸೋಶಿಯಲ್ ವಕ್ಸ್, ರೋಶನಿ ನಿಲಯದಲ್ಲಿ ಸೆಡ್ಸ್ ಕೇರ್ ಕ್ಯಾನ್ಸರ್ ವೆಬ್‌ಸೈಟ್‌ನ್ನು ಬಿಡುಗಡೆ ಮಾಡಲಾಗುವುದು ಎಂದು ಸೆಡ್ಸ್‌ನ ನಿರ್ದೇಶಕಿ ರಿಟಾ ನರೋನ್ಹಾ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಪರ, ಸ್ವಸ್ಥ ಹಾಗೂ ಸುಸ್ಥಿರ ಸಮಾಜದ ಕಲ್ಪನೆಯೊಂದಿಗೆ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ ಜನರಿಗಾಗಿ, ಪ್ರತ್ಯೇಕವಾಗಿ ಮಹಿಳೆ ಹಾಗೂ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳ ಲಾಗಿದೆ. ಪರ್ಯಾಯ ಶಿಕ್ಷಣ, ಜನಸಂಘಟನೆಗಳ ವೃದ್ಧಿ, ಅನ್ವಯಯೋಗ್ಯ ಸೇವಾ ಮಾದರಿಗಳ ಅನುಷ್ಠಾನ ಮತ್ತು ಸಂಶೋಧನೆಗಳನ್ನು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

2013ರಲ್ಲಿ ಮಧ್ಯಾವಧಿಯಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಪ್ರಾರಂಭಿಸಿದ ಕೇರ್ ಚೈಲ್ಡ್ ಕ್ಯಾನ್ಸರ್ (ಕ್ಯಾನ್ಸರ್ ಬಾಧಿತ ಮಕ್ಕಳ ರಕ್ಷಣೆ) ಸದ್ಯ ಕೆಎಂಸಿ, ಫಾದರ್ ಮುಲ್ಲರ್ ಆಸ್ಪತ್ರೆಗಳೊಂದಿಗೆ ಸೇರಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೇರಿದ ಕ್ಯಾನ್ಸರ್ ಬಾಧಿತ ಮಕ್ಕಳಿಗೆ ನೆರವು ನೀಡುತ್ತಿದೆ ಎಂದರು.

ಮಕ್ಕಳನ್ನು ಅವರ ಪೋಷಕರು ನಿಗದಿತ ಸಮಯದಲ್ಲಿ ವೈದ್ಯರ ಬಳಿ ಶೂಶ್ರುಷೆಗಾಗಿ ಕರೆತರುವಂತೆ ನಿಗಾವಹಿಸಲಾಗುತ್ತದೆ. ಸುಮಾರು ನೂರಕ್ಕಿಂತ ಹೆಚ್ಚು ಮಕ್ಕಳಿಗೆ ಸರಕಾರದ ಯೋಜನೆಗಳಿಂದ ಲಭ್ಯವಾಗದಿರುವ ಆರೋಗ್ಯ ತಪಾಸಣೆ, ಔಷಧಕ್ಕೆ ತಗಲುವ ವೆಚ್ಚ, ಪ್ರಯಾಣ ದರ ಹಾಗೂ ಆಸ್ಪತ್ರೆಯಲ್ಲಿ ದಾಖಲಾದ ಸಮಯಾವಧಿಯಲ್ಲಿ ದಿನಭತ್ಯೆ ಇತ್ಯಾದಿಗಳಿಗೆ ಆರ್ಥಿಕ ಸಹಕಾರ ನೀಡುವಲ್ಲಿ ಸಂಸ್ಥೆ ಮುಂದಾಗುತ್ತಿದೆ ಎಂದು ಅವರು ತಿಳಿಸಿದರು.

ಕೇರ್ ಚೈಲ್ಡ್ ಕ್ಯಾನ್ಸರ್ ವೆಬ್‌ಸೈಟ್‌ನ್ನು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಪಂ ಸಿಇಒ ಸೆಲ್ವಮಣಿ ಆರ್., ವೆನ್ಲಾಕ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಎಚ್.ಆರ್.ರಾಜೇಶ್ವರಿ ದೇವಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಸ್ಕೂಲ್ ಆಫ್ ಸೋಸಿಯಲ್ ವರ್ಕ್ ರೋಶನಿ ನಿಲಯದ ಪ್ರಾಂಶುಪಾಲೆ ಡಾ.ಜುಲಿಯೇಟ್ ಸಿ.ಜೆ., ಮಾಜಿ ಶಾಸಕ ಜೆ.ಆರ್.ಲೋಬೊ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸೆಡ್ಸ್ ಕೇರ್ ಚೈಲ್ಡ್ ಕ್ಯಾನ್ಸರ್ ಮುಖ್ಯ ಸಂಯೋಜಕ ಹೆರಾಲ್ಡ್ ಮೊರಾಸ್, ಚೈಲ್ಡ್ ಕ್ಯಾನ್ಸರ್ ತಜ್ಞ ಡಾ.ಹರ್ಷಪ್ರಸಾದ್ ಡಾ.ಬಾಳಿಗಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News