ಬಂಟ್ವಾಳ: ಇಂದಿರಾ ಕ್ಯಾಂಟೀನ್ ಸುತ್ತ ಆವರಣಗೋಡೆ ನಿರ್ಮಾಣಕ್ಕೆ ಆಕ್ಷೇಪ; ಜಿಲ್ಲಾಧಿಕಾರಿ ಭೇಟಿ

Update: 2018-11-13 17:20 GMT

ಬಂಟ್ವಾಳ, ನ. 13: ಬಿ.ಸಿ.ರೋಡ್ ಮಿನಿ ವಿಧಾನಸೌಧದ ಪಕ್ಕದಲ್ಲಿ ಇನ್ನೂ ಲೋಕಾರ್ಪಣೆಯಾಗದ ಇಂದಿರಾ ಕ್ಯಾಂಟೀನ್ ಸುತ್ತ ಡಾಂಬರು ರಸ್ತೆಯಲ್ಲೇ  ಆವರಣಗೋಡೆ ನಿರ್ಮಾಣಕ್ಕೆ ಆಕ್ಷೇಪ ಬಂದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಹಶೀಲ್ದಾರ್ ಪುರಂದರ ಹೆಗ್ಡೆ, ಯೋಜನಾಧಿಕಾರಿ ಪ್ರಸನ್ನ, ಪುರಸಭೆ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಅವರು ಸ್ಥಳದ ಕುರಿತು ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಿದರು. ಈ ಸಂದರ್ಭ ಆವರಣಗೋಡೆ ನಿರ್ಮಿಸುವುದರಿಂದ ವಾಹನ ಸಂಚಾರಕ್ಕೆ ಆಗುವ ಅನಾನುಕೂಲತೆ ಸಹಿತ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಜಿಲ್ಲಾಧಿಕಾರಿ ಬಳಿ ಪರಿಸ್ಥಿತಿ ವಿವರಿಸಿದ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ನಾವು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಯಾವತ್ತೂ ವಿರೋಧ ವ್ಯಕ್ತಪಡಿಸಿಲ್ಲ. ಅದೊಂದು ಸರಕಾರಿ ಯೋಜನೆಯಾಗಿದ್ದು, ಪೂರ್ಣ ಸಹಮತವಿದೆ. ಆದರೆ, ಕ್ಯಾಂಟೀನ್‌ಗೆ ಆವರಣ ಗೋಡೆ ನಿರ್ಮಾಣ ಸಂದರ್ಭ ರಸ್ತೆಯನ್ನೇ ಅತಿಕ್ರಮಿಸಲಾಗಿದೆ ಎಂದು ದೂರಿಕೊಂಡರು.

ಇಂದಿರಾ ಕ್ಯಾಂಟೀನ್ ಆವರಣ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿ ಕಳೆದ ಶನಿವಾರ ಬಿ.ಸಿ.ರೋಡಿಗೆ ಭೇಟಿ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಪುರಸಭೆಯ ಮುಖ್ಯಾಧಿಕಾರಿ ಹಾಗೂ ಕಿರಿಯ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಬಿ.ಸಿ.ರೋಡ್ ಮಿನಿ ವಿಧಾನಸೌಧದ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ ಹಾಗೂ ಯೋಜನೆಯ ನಕ್ಷೆಯನ್ನು ಗಮನಿಸಿ, ಪರಿಶೀಲಿಸಲಾಗುವುದು. ಪಾರ್ಕಿಂಗ್ ವ್ಯವಸ್ಥೆಗೆ ಯಾವುದೇ ತೊಡಕುಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು.
- ಸಸಿಕಾಂತ ಸೆಂಥಿಲ್, ಜಿಲ್ಲಾಧಿಕಾರಿ

ಪಾರ್ಕಿಂಗ್‍ಗೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ: ರೈ

ಬಿ.ಸಿ.ರೋಡ್ ಮಿನಿ ವಿಧಾನಸೌಧದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಸುತ್ತ ಆವರಣಗೋಡೆ ನಿರ್ಮಿಸಿದರೆ ಪಾರ್ಕಿಂಗ್‍ಗೆ ಯಾವುದೇ ತೊಂದರೆ, ಸಮಸ್ಯೆಗಳು ಉಂಟಾಗುವುದಿಲ್ಲ. ಬಡವರ ಕ್ಯಾಂಟೀನ್ ನಿರ್ಮಾಣವನ್ನು ವಿರೋಧಿಸುವವರು ಇದಕ್ಕೆ ಆಕ್ಷೇಪ ಸಲ್ಲಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.

ಬಡವರಿಗೆ ಸುಲಭ ದರದಲ್ಲಿ ಊಟ ಉಪಾಹಾರ ಒದಗಿಸಲು ಇಂದಿರಾ ಕ್ಯಾಂಟೀನ್ ಸಹಕಾರಿ. ಅದಕ್ಕೆ ಆವರಣ ಗೋಡೆ ನಿರ್ಮಿಸಿದರೆ ಪಾರ್ಕಿಂಗ್‍ಗೆ ಅಡ್ಡಿಯಾಗುವುದಿಲ್ಲ. ಅದರ ಎದುರಿನಲ್ಲೇ ಅತಿಕ್ರಮಿತ ಜಾಗಗಳಿವೆ. ಅವುಗಳನ್ನು ತೆರವುಗೊಳಿಸಿದರೆ ಅಲ್ಲೇ ಪಾರ್ಕಿಂಗ್ ಮಾಡಲು ಸಾಧ್ಯವಿದೆ. ಅವುಗಳನ್ನು ತೆರವುಗೊಳಿಸಲು ಒತ್ತಾಯಿಸದೆ, ಬಡವರ ಕ್ಯಾಂಟೀನ್ ಆವರಣ ಗೋಡೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News