×
Ad

​ಉಳ್ಳಾಲ: ಕೊಲೆ ಆರೋಪಿಗಳ ನಡುವೆ ಮಾರಾಮಾರಿ, ಓರ್ವ ಬಂಧನ

Update: 2018-11-13 23:10 IST

ಉಳ್ಳಾಲ, ನ. 13: 2016ರಲ್ಲಿ ರಾಜು ಕೋಟ್ಯಾನ್ ಎಂಬವರನ್ನು  ಹತ್ಯೆಗೈದ ಆರೋಪಿಗಳ ನಡುವೆ ಮಾರಾಮಾರಿ  ನಡೆದು ಓರ್ವನನ್ನು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಕೋಡಿಯ ಸೆಲೂನ್ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೋಡಿ ನಿವಾಸಿ ಸುಹೈಲ್ (24) ಎಂದು ಗುರುತಿಸಲಾಗಿದೆ. ಕೋಡಿ  ನಿವಾಸಿ ಆಸೀಫ್ ಯಾನೆ ಆಚಿ (22)  ಎಂಬಾತ ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಘಟನೆ ವಿವರ: ಸುಹೈಲ್ ಮತ್ತು ಆಸೀಫ್ ಇಬ್ಬರೂ 2016ರಲ್ಲಿ ನಸುಕಿನ ಜಾವ ಮೀನುಗಾರಿಕೆಗೆಂದು ಕೆಲಸಕ್ಕೆ  ತೆರಳುತ್ತಿದ್ದ ಮೊಗವೀರ ಸಮಾಜದ  ರಾಜು ಕೋಟ್ಯಾನ್  ಎಂಬವರನ್ನು ಕಲ್ಲಿನಿಂದ ಹೊಡೆದು  ಕೊಲೆ ನಡೆಸಿದ್ದರು. ಘಟನೆಯಿಂದ ಉಳ್ಳಾಲದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು,  ಇದಕ್ಕೆ ಪ್ರತೀಕಾರವಾಗಿ ಒಂದು ಕೊಲೆ ಮತ್ತು ಕೊಲೆಯತ್ನ ಪ್ರಕರಣವೂ ಉಳ್ಳಾಲದಲ್ಲಿ ನಡೆದಿತ್ತು.

ಜಾಮೀನಿನ ಮೇಲೆ ಹೊರಬಂದಿರುವ  ಸುಹೈಲ್ ಮತ್ತು ಆಸೀಫ್ ನಡುವೆ ವೈಮನಸ್ಸಿತ್ತು.  ಹಿಂದೆ ಸುಹೈಲ್ ಆಸೀಫ್ ಗೆ ಹಲ್ಲೆ ನಡೆಸಿದ್ದನು. ಇದಕ್ಕೆ ಪ್ರತೀಕಾರವಾಗಿ ಸುಹೈಲ್ ಕೋಡಿ ಸಮೀಪದ ಸೆಲೂನಿನಲ್ಲಿ ಕುಳಿತಿದ್ದ ಸಂದರ್ಭ ಆಸೀಫ್ ಮತ್ತು ಮೂವರ ತಂಡ ಸ್ಥಳಕ್ಕಾಗಮಿಸಿ ಸುಹೈಲ್ ಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇದೇ ವೇಳೆ ಸುಹೈಲ್ ಚೂರಿಯಿಂದ  ಆಸೀಫ್ ಗೆ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ದೂರಲಾಗಿದೆ. ಘಟನೆ ವೇಳೆ ಸ್ಥಳದಲ್ಲಿ ಜನ ಸೇರಿದ್ದು, ಪೊಲೀಸರು ಆಗಮಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಸುಹೈಲ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆಯತ್ನ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News