ರಾಮಮಂದಿರ ನಿರ್ಮಾಣಕ್ಕೆ ಪ್ರಸಕ್ತ ಕಾಲ: ಪಲಿಮಾರು ಸ್ವಾಮೀಜಿ

Update: 2018-11-14 14:54 GMT

ಉಡುಪಿ, ನ.14: ಇಂದು ರಾಮಮಂದಿರ ನಿರ್ಮಾಣ ಮಾಡುವ ಅವಕಾಶ ಒದಗಿಬಂದಿದೆ. ಹೀಗಾಗಿ ಯಾರು ಉದಾಸೀನ ಮಾಡದೆ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ಯಾತ್ರಿನಿವಾಸದಲ್ಲಿ ಬುಧವಾರ ವಿಶ್ವ ಹಿಂದೂ ಪರಿಷದ್ ವತಿಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಡಿ.2ರಂದು ನಡೆಯುವ ಜನಾಗ್ರಹ ಸಭೆಯ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಮ ದೇವರ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆಂಬ ಆಸೆ ಪ್ರತಿಯೊಬ್ಬರಿಗೆ ಇದೆ. ಆದರೆ ಅದನ್ನು ಯಾವ ರೀತಿಯಾಗಿ ಸಂಸತ್ತಿಗೆ ಮುಟ್ಟಿಸಬೇಕೆಂದು ತಿಳಿದಿಲ್ಲ. ಡಿ.2ರಂದು ನಡೆಯುವ ಹಿಂದೂ ಸಮಾಜೋತ್ಸವದಲ್ಲಿ ನಾವೆಲ್ಲರೂ ಒಟ್ಟು ಸೇರಿ ರಾಮಮಂದಿರ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದರು.

ಆರೆಸ್ಸೆಸ್ ಮಂಗಳೂರು ವಿಭಾಗದ ಸಹಕಾರ್ಯವಾಹ ವಾದಿರಾಜ್ ಮಾತನಾಡಿ, ಸಂವಿಧಾನದ ಚೌಕಟ್ಟನ್ನು ಬಳಸಿಕೊಂಡು ಹಿಂದೂ ಸಮಾಜವನ್ನು ಮಟ್ಟಹಾಕುವುದು ಹೇಗೆ ಎಂಬ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಲಾಗುತ್ತಿದೆ. ಸಮಾಜದಲ್ಲಿ ಏಕಮುಖವಾದ ಚಿಂತನೆ ಮೊಳಗಬೇಕು. ಅದಕ್ಕೆ ಸಂವಿಧಾನ ದಲ್ಲೂ ಬೆಲೆ ಇದೆ ಎಂದು ತಿಳಿಸಿದರು.

ಉಡುಪಿ ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ವಿಲಾಸ್ ನಾಯಕ್, ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾಧ್ಯಕ್ಷ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.

ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಸ್ವಾಗತಿಸಿದರು. ನಗರಾಧ್ಯಕ್ಷ ಸಂತೋಷ್ ಬೊಳ್ಜೆ ವಂದಿಸಿದರು. ಜಿಲ್ಲಾ ಸಹಸಂಚಾಲಕಿ ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News