ರಾಕೇಶ್ ಅಸ್ತಾನಾರ ದುಬೈ ಸಂಪರ್ಕ ಸಾಬೀತು: ಸಿಬಿಐ ಜಂಟಿ ನಿರ್ದೇಶಕ

Update: 2018-11-14 15:03 GMT

ಹೊಸದಿಲ್ಲಿ,ನ.14: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾರ ಫೋನ್ ಕರೆಗಳು ಮತ್ತು ಸಂದೇಶಗಳಿಂದ ಅವರಿಗೆ ದುಬೈ ಸಂಪರ್ಕವಿರುವುದು ಸಾಬೀತಾಗುತ್ತದೆ ಎಂದು ಸಿಬಿಐ ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಪರ ವಕೀಲ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಬುಧವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶರ್ಮಾ ಪರ ವಕೀಲ ಎಂ.ಎ.ನಿಯಾಝಿ, ಆರೋಪಿ ಮತ್ತು ದುಬೈಯಲ್ಲಿರುವ ಮಧ್ಯವರ್ತಿಯ ನಡುವೆ ನಡೆದ ಫೋನ್ ಸಂಭಾಷಣೆಗಳು ಮತ್ತು ಸಂದೇಶಗಳ ದಾಖಲೆಗಳು ನಮ್ಮ ಬಳಿಯಿದೆ. ಅವೆಲ್ಲವನ್ನೂ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ನ್ಯಾಯಾಧೀಶ ನಜ್ಮಿ ವಝೀರಿ, ಅಸ್ತಾನರನ್ನು ಬಂಧಿಸದಂತೆ ನೀಡಿದ್ದ ಮಧ್ಯಂತರ ತಡೆಯನ್ನು ನವೆಂಬರ್ 28ರ ವರೆಗೆ ವಿಸ್ತರಿಸಿದ್ದಾರೆ. ಎ.ಕೆ.ಶರ್ಮಾರ ಕುಟುಂಬ ಸಿಬಿಐಯ ಪಟ್ಟಿಯಲ್ಲಿರುವ ವ್ಯಕ್ತಿಗಳ ಜೊತೆ ಸೇರಿ ನಕಲಿ ಕಂಪೆನಿಗಳನ್ನು ಸ್ಥಾಪಿಸಿದೆ ಎಂದು ಅಸ್ತಾನ ಈ ಹಿಂದೆ ಆರೋಪಿಸಿದ್ದರು. ದಿಲ್ಲಿಯ ದ್ವಾರ್ಕಾರದಲ್ಲಿ ಶರ್ಮಾರ ಸಹಾಯಕ ಅಧಿಕಾರಿ ಅಶ್ವನಿ ಗುಪ್ತಾ ಶೆಲ್ ಕಂಪೆನಿಗಳನ್ನು ನಡೆಸುತ್ತಿದ್ದಾರೆ ಎಂದು ಅಸ್ತಾನಾ ದೂರಿದ್ದರು. ತಮ್ಮ ಬಳಿಯಿರುವ ಪುರಾವೆಗಳನ್ನು ಪ್ರಕರಣದ ತನಿಖೆ ನಡೆಸುವ ಸಂಸ್ಥೆಗೆ ಯಾಕೆ ನೀಡಿಲ್ಲ ಎಂದು ನ್ಯಾಯಾಧೀಶ ವಝೀರಿ ಕೇಳಿದ ಪ್ರಶ್ನೆಗೆ, ಈ ಪ್ರಕರಣ ತನಿಖೆಯನ್ನು ಯಾರು ನಡೆಸುತ್ತಿದ್ದಾರೆ ಎಂಬುದೇ ನಮಗೆ ತಿಳಿದಿಲ್ಲ ಎಂದು ನಿಯಾಝಿ ಉತ್ತರಿಸಿದ್ದಾರೆ.

ಅಸ್ತಾನಾ ವಿರುದ್ಧದ ತನಿಖೆಯು ಆರಂಭಿಕ ಹಂತದಲ್ಲಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳು ಮತ್ತು ಕಡತಗಳು ಪರಿಶೀಲನೆಗಾಗಿ ಕೇಂದ್ರ ವಿಚಕ್ಷಣ ಆಯೋಗದ ಬಳಿಯಿರುವುದರಿಂದ ತನಿಖೆಯು ಕುಂಟುತ್ತಾ ಸಾಗುತ್ತಿದೆ ಎಂದು ತನಿಖಾ ಸಂಸ್ಥೆ ಬುಧವಾರ ತಿಳಿಸಿತ್ತು. ಸಿಬಿಐ ವಿಚಾರಣೆ ನಡೆಸುತ್ತಿದ್ದ ಹೈದರಾಬಾದ್ ಮೂಲದ ಉದ್ಯಮಿಯಿಂದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಲಂಚ ಪಡೆದಿದ್ದರು ಎಂದು ರಾಕೇಶ್ ಅಸ್ತಾನಾ ದೇಶದ ಅತ್ಯುನ್ನತ ಭ್ರಷ್ಟಾಚಾರ ವಿರೋಧಿ ಕಣ್ಗಾವಲು ಪಡೆ ಮುಖ್ಯ ವಿಚಕ್ಷಣ ಆಯೋಗಕ್ಕೆ ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News