ಇಸ್ರೋದಿಂದ ಸಂವಹನ ಉಪಗ್ರಹ ಜಿಸ್ಯಾಟ್-29 ಉಡಾವಣೆ

Update: 2018-11-14 15:16 GMT

ಶ್ರೀಹರಿಕೋಟ,ನ.14: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರದಂದು ಜಿಎಸ್‌ಎಲ್ವಿ ಮಾರ್ಕ್ ಥರ್ಡ್ ರಾಕೆಟ್ ಮೂಲಕ ಸಂವಹನ ಉಪಗ್ರಹ ಜಿಸ್ಯಾಟ್-29ನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಿತು. ಪ್ರಸಕ್ತ ವರ್ಷ ಇಸ್ರೋ ಉಡಾಯಿಸಿದ ಐದನೇ ಉಪಗ್ರಹ ಇದಾಗಿದೆ.

ಈ ಸಂವಹನ ಉಪಗ್ರಹವು ಅತ್ಯಾಧುನಿಕ ಮಾದರಿಯ ಸಂವಹನ ಟ್ರಾನ್ಸ್‌ ಪಾಂಡರ್‌ಗಳನ್ನು ಹೊಂದಿದ್ದು, ಇದರಿಂದ ಭಾರತದ ಕಡಿದಾದ ಪ್ರದೇಶಗಳಲ್ಲೂ ಹೈಸ್ಪೀಡ್ ದತ್ತಾಂಶ ವರ್ಗಾವಣೆ ಸಾಧ್ಯವಾಗಲಿದೆ. ಇಸ್ರೋದ ಅತ್ಯಂತ ಭಾರದ ರಾಕೆಟ್ ಆಗಿರುವ ಜಿಎಸ್‌ಎಲ್ವಿ ಥರ್ಡ್‌ಗೆ ಇದು ಎರಡನೇ ಪರಿಕ್ಷಾರ್ಥ ಉಡಾವಣೆಯಾಗಿದೆ. ಈ ರಾಕೆಟ್ ನಾಲ್ಕು ಟನ್ ಉಪಗ್ರಹಗಳನ್ನು ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಗಜ ಚಂಡಮಾರುತ ಶ್ರೀಹರಿಕೋಟದಲ್ಲಿ ಭೂಸ್ಪರ್ಶ ಮಾಡುವ ಸಾಧ್ಯತೆಗಳಿದ್ದ ಕಾರಣ, ಆರಂಭದಲ್ಲಿ ಬುಧವಾರ ಮುಂಜಾನೆ 5.08ಕ್ಕೆ ಉಪಗ್ರಹವನ್ನು ಉಡಾಯಿಸುವ ಯೋಜನೆಯನ್ನು ಇಸ್ರೋ ರೂಪಿಸಿದ್ದರೂ ನಂತರ ಹನ್ನೆರಡು ಗಂಟೆಗಳ ಕಾಲ ಮುಂದೂಡಿತು. ಬುಧವಾರದ ಉಡಾವಣೆ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಅತ್ಯಂತ ಪ್ರಮುಖ ಯೋಜನೆ ಮತ್ತು ಮೈಲಿಗಲ್ಲಾಗಿದೆ ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ.

ಈ ಉಪಗ್ರಹವು ಕೇಂದ್ರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ಉತ್ತಮ ಸಂವಹನ ಸಂಪರ್ಕವನ್ನು ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ. ಈ ಯಶಸ್ವಿ ಉಡಾವಣೆಯು ಭವಿಷ್ಯದಲ್ಲಿ ಇನ್ನಷ್ಟು ಸುಧಾರಿತ ಉಪಗ್ರಹಗಳನ್ನು ನಿರ್ಮಿಸಲು ಇಸ್ರೋಗೆ ಪ್ರೇರಣೆ ನೀಡಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News