ರೋಗಿಯ ಗಾಯಕ್ಕೆ ಹೊಲಿಗೆ ಹಾಕಿದ ಅಟೆಂಡರ್ !

Update: 2018-11-14 15:25 GMT

ರೊಹ್ಟಕ್, ನ.14: ಹರ್ಯಾಣದ ರೋಹ್ಟಕ್ ಸಿವಿಲ್ ಆಸ್ಪತ್ರೆಯ ಅಟೆಂಡರ್ ಒಬ್ಬ ರೋಗಿಯೊಬ್ಬನ ತಲೆಯಲ್ಲಾದ ಗಾಯಕ್ಕೆ ಹೊಲಿಗೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರೋಗಿಯ ಸಂಬಂಧಿಯೊಬ್ಬರು ಈ ವೀಡಿಯೋ ತೆಗೆದಿದ್ದಾರೆನ್ನಲಾಗಿದೆ.

ವೈದ್ಯರು ಅದೇ ಕೊಠಡಿಯಲ್ಲಿದ್ದರೂ ಒಮ್ಮೆ ಮಾತ್ರ ತನ್ನನ್ನು ತಪಾಸಣೆ ನಡೆಸಿದರಲ್ಲದೆ ನಂತರ ಯಾವುದೇ ಚಿಕಿತ್ಸೆ ನೀಡುವ ಗೋಜಿಗೆ ಹೋಗಿಲ್ಲ ಎಂದು ರೋಗಿ ದೂರಿದ್ದಾರೆ. ``ನನಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಯಾವುದೇ ನೋವು ನಿವಾರಕವನ್ನೂ ನನಗೆ ನೀಡಲಾಗಿರಲಿಲ್ಲ. ಅಲ್ಲಿನ ಅಟೆಂಡರ್ ನನ್ನ ಕೈಗೆ ಆದ ಗಾಯಕ್ಕೆ ಹೊಲಿಗೆ ಹಾಕಲು ಆರಂಭಿಸಿದ. ವೈದ್ಯರು ಕೂಡ ಹತ್ತಿರದಲ್ಲಿಯೇ ಕುಳಿತಿದ್ದರು,'' ಎಂದು ಆತ ಹೇಳಿದ್ದಾರೆ.

``ಎಷ್ಟು ಚೆನ್ನಾಗಿ ಹೊಲಿಗೆ ಹಾಕಲಾಗಿದೆ ಎಂದು ತಿಳಿದಿಲ್ಲ. ನೋವು ಇನ್ನೂ ಇರುವುದರಿಂದ ಇನ್ನೊಬ್ಬರು ವೈದ್ಯರ ಬಳಿ ಹೋದಾಗ ಹೊಲಿಗೆ ಸರಿಯಾಗಿ ಹಾಕಲಾಗಿಲ್ಲ ಎಂದು ಮತ್ತೆ ಬ್ಯಾಂಡೇಜ್ ಹಾಕಿದರು,'' ಎಂದು ಆತ ತಿಳಿಸಿದ್ದಾರೆ.

ಈ ವರ್ಷದ ಆಗಸ್ಟ್ ತಿಂಗಳಲ್ಲಿ  ಇಂತಹುದೇ ಇನ್ನೊಂದು ಘಟನೆ ಗುಜರಾತ್‍ನ ಭರೂಚ್ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿತ್ತು. ಅಲ್ಲಿ ಸ್ವೀಪರ್ ಒಬ್ಬ ರೋಗಿಯ ಗಾಯಗಳನ್ನು ಹೊಲಿದಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News