ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಿಸಿದ ಕೇಂದ್ರದ ವಿರುದ್ಧ ಮಮತಾ ಆಕ್ರೋಶ

Update: 2018-11-14 15:59 GMT

ಹೊಸದಿಲ್ಲಿ, ನ.14: ಐತಿಹಾಸಿಕ ನಗರಗಳ ಹೆಸರನ್ನು ಏಕಪಕ್ಷೀಯವಾಗಿ ಬದಲಿಸುತ್ತಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಟಿಎಂಸಿ ಮುಖಂಡೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಬಿಜೆಪಿ ತನ್ನ ಸ್ವಹಿತಾಸಕ್ತಿಗಾಗಿ ಐತಿಹಾಸಿಕ ನಗರ ಹಾಗೂ ಸಂಸ್ಥೆಗಳ ಹೆಸರನ್ನು ಏಕಪಕ್ಷೀಯವಾಗಿ ಬದಲಿಸುತ್ತಿರುವುದನ್ನು ಇತ್ತೀಚಿಗೆ ಬಹುತೇಕ ಎಲ್ಲಾ ದಿನವೂ ಗಮನಿಸಿದ್ದೇನೆ. ಆದರೆ ಪಶ್ಚಿಮಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸುವಂತೆ ರಾಜ್ಯದ ವಿಧಾನಸಭೆಯಲ್ಲಿ ಅವಿರೋಧ ನಿರ್ಣಯವನ್ನು ಅಂಗೀಕರಿಸಿದ್ದರೂ ಇದನ್ನು ಬಿಜೆಪಿ ಸರಕಾರ ಕಡೆಗಣಿಸಿದೆ ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ ನಲ್ಲಿ ಮಮತಾ ಹೇಳಿದ್ದಾರೆ.

ಸ್ವಾತಂತ್ರ್ಯ ದೊರೆತ ಬಳಿಕ, ರಾಜ್ಯಗಳ ಜನರ ಭಾವನೆ ಹಾಗೂ ಸ್ಥಳೀಯ ಭಾಷೆಗಳನ್ನು ಗಮನದಲ್ಲಿರಿಸಿಕೊಂಡು ಕೆಲವು ರಾಜ್ಯಗಳ ಮತ್ತು ನಗರಗಳ ಹೆಸರನ್ನು ಬದಲಿಸಲಾಗಿದೆ. (ಒರಿಸ್ಸಾದ ಹೆಸರನ್ನು ಒಡಿಶಾ, ಪಾಂಡಿಚೇರಿಯ ಹೆಸರನ್ನು ಪುದುಚೇರಿ ಇತ್ಯಾದಿ). ಇದು ವಾಸ್ತವಿಕವಾಗಿದೆ. ಆದರೆ ಬಂಗಾಳದ ವಿಷಯದಲ್ಲಿ ಸರಕಾರದ ನಿಲುವು ಸಂಪೂರ್ಣ ಭಿನ್ನವಾಗಿದೆ ಎಂದವರು ಹೇಳಿದ್ದಾರೆ. ರಾಜ್ಯದ ಮಾತೃಭಾಷೆಯಾಗಿರುವ ಬಾಂಗ್ಲಾದ ಕುರಿತು ಸ್ಥಳೀಯರಲ್ಲಿ ಇರುವ ಭಾವನೆಯನ್ನು ಗಮನಿಸಿ ರಾಜ್ಯದ ಹೆಸರನ್ನು ಪಶ್ಚಿಮಬಂಗಾಳದ ಬದಲು ಇಂಗ್ಲಿಷ್‌ನಲ್ಲಿ ಬೆಂಗಾಲ್, ಬೆಂಗಾಲಿಯಲ್ಲಿ ಬಾಂಗ್ಲಾ, ಹಿಂದಿಯಲ್ಲಿ ಬಂಗಾಲ್ ಎಂದು ಬದಲಿಸುವಂತೆ ವಿಧಾನಸಭೆ ನಿರ್ಣಯ ಅಂಗೀಕರಿಸಿತು. ಆದರೆ ಕೇಂದ್ರ ಗೃಹ ಇಲಾಖೆ ಎಲ್ಲಾ ಮೂರು ಭಾಷೆಗಳಲ್ಲೂ ಬಾಂಗ್ಲಾ ಎಂಬ ಹೆಸರು ಇರುವಂತೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಂತೆ ಸಲಹೆ ಮಾಡಿತು. ಅದರಂತೆ ನಿರ್ಣಯ ಅಂಗೀಕರಿಸಿ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿದ್ದು ಇದನ್ನು ಸುದೀರ್ಘಾವಧಿಯಿಂದ ತನ್ನ ಬಳಿಯೇ ಇರಿಸಿಕೊಂಡಿದೆ ಎಂದವರು ಹೇಳಿದ್ದಾರೆ.

  ಅವಿಭಜಿತ ಬಂಗಾಳಕ್ಕೆ ಕೋಲ್ಕತಾ ರಾಜಧಾನಿಯಾಗಿತ್ತು. ಭಾರತ ಹಾಗೂ ಬಾಂಗ್ಲಾದೇಶಗಳ ರಾಷ್ಟ್ರಗೀತೆಯನ್ನು ರವೀಂದ್ರನಾಥ ಟಾಗೋರ್ ಬರೆದಿದ್ದಾರೆ. ನಾವು ಭಾರತವನ್ನು ಪ್ರೀತಿಸುವ ಜೊತೆಗೆ ಬಾಂಗ್ಲಾದೇಶ ಹಾಗೂ ಬಂಗಾಳವನ್ನೂ ಪ್ರೀತಿಸುತ್ತೇವೆ. ಹೆಸರುಗಳಲ್ಲಿ ಸಾಮ್ಯತೆ ಇದ್ದರೆ ಅದೊಂದು ತೊಡಕಾಗದು. ಪಂಜಾಬ್ ಎಂಬ ಹೆಸರು ಭಾರತ ಹಾಗೂ ಪಾಕಿಸ್ತಾನದ ನಗರಕ್ಕಿಲ್ಲವೇ ಎಂದವರು ಪ್ರಶ್ನಿಸಿದ್ದಾರೆ. ರಾಜ್ಯದ ಅಸೆಂಬ್ಲಿಯಲ್ಲಿ ಶೂನ್ಯಬಲವನ್ನು ಹೊಂದಿರುವ ಪಕ್ಷ(ಬಿಜೆಪಿ)ವು ಹೆಸರು ಬದಲಾವಣೆಯನ್ನು ನಿರ್ಧರಿಸುವುದೋ ಅಥವಾ ರಾಜ್ಯ ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಿದ ನಿರ್ಣಯದ ಆಧಾರದಲ್ಲಿ ಹೆಸರು ಬದಲಾಯಿಸುವುದೋ ಎಂಬ ಪ್ರಶ್ನೆ ಇಲ್ಲಿ ಮೂಡಿದೆ ಎಂದು ಮಮತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News