×
Ad

3ನೇ ಮಣಿಪಾಲ ಮ್ಯಾರಥಾನ್ ವೆಬ್‌ಸೈಟ್‌ಗೆ ಚಾಲನೆ

Update: 2018-11-14 21:45 IST

ಮಣಿಪಾಲ, ನ.14: ಮಣಿಪಾಲದಲ್ಲಿ ಮುಂದಿನ ವರ್ಷ ನಡೆಯುವ ಮೂರನೇ ಮಣಿಪಾಲ ಮ್ಯಾರಥಾನ್‌ನ ವೆಬ್‌ಸೈಟ್ ಹಾಗೂ ಥೀಮ್‌ಗೆ ಇಂದಿಲ್ಲಿ ಚಾಲನೆ ನೀಡಲಾಯಿತು. ಮಣಿಪಾಲ ಎಜ್ಯು ಬಿಲ್ಡಿಂಗ್‌ನ ಸೆನೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಎಂಇಎಂಜಿಯ ಅಧ್ಯಕ್ಷ ಡಾ.ರಂಜನ್ ಆರ್.ಪೈ ಇವುಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಡಾ.ಎಚ್. ವಿನೋದ್ ಭಟ್, ಸಹ ಕುಲಪತಿಗಳಾದ ಡಾ. ಪಿಎಲ್‌ಎನ್‌ಜಿ ರಾವ್ ಹಾಗೂ ಡಾ.ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು.

ಮುಂದಿನ ವರ್ಷದ ಫೆ.10ರಂದು ನಡೆಯುವ ಮಣಿಪಾಲ ಮ್ಯಾರಥಾನ್‌ನ ವಿಷಯ ‘ಮಾನಸಿಕ ಆರೋಗ್ಯದ ಅರಿವು’. ಸಭೆಯಲ್ಲಿ ಹಿಂದಿನ ಎರಡು ಮ್ಯಾರಥಾನ್‌ಗಳ ಕುರಿತು ಮಣಿಪಾಲ ರನ್ನರ್ ಕ್ಲಬ್ ಹಾಗೂ ವಿಎಸ್‌ಒನ ಸದಸ್ಯರು ತುಣುಕುಗಳನ್ನು ಪ್ರಸ್ತುತ ಪಡಿಸಿದರು.

2017ರಲ್ಲಿ ಸುಮಾರು 4,000 ಮಂದಿ ಹಾಗೂ ಈ ವರ್ಷ 6000 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಈ ವರ್ಷ ಕನಿಷ್ಠ 10,000 ಮಂದಿ ಸ್ಪರ್ಧಿಗಳು ಭಾಗವಹಿಸುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಈ ಸಲವೂ ಹಾಫ್ ಮ್ಯಾರಥಾನ್ ಅಲ್ಲದೇ ವಿವಿಧ ವರ್ಗದವರಿಗೆ 2ಕಿ.ಮೀ., 5ಕಿ.ಮೀ. ಹಾಗೂ 10ಕಿ.ಮೀ. ಓಟಗಳಿರುತ್ತವೆ ಎಂದು ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ವಿವರಿಸಿದರು.

‘ದೇಶದಾದ್ಯಂತ ಸ್ಕೇಟರ್ಸ್‌ ಸಂಘಟನೆ ನಡೆಸಿದ ಮತದಾನವೊಂದರಲ್ಲಿ ಮಣಿಪಾಲ ಮ್ಯಾರಥಾನ್ ದೇಶದ ಮ್ಯಾರಥಾನ್‌ಗಳಲ್ಲಿ ಮೂರನೇ ಅತ್ಯುತ್ತಮ ಮ್ಯಾರಥಾನ್ ಎಂದು ಆಯ್ಕೆಯಾಗಿದೆ.’ಎಂದು ಎಂಕಾಪ್ಸ್‌ನ ನಾಲ್ಕನೇ ವರ್ಷದ ಬಿ.ಫಾರ್ಮ್ ವಿದ್ಯಾರ್ಥಿ ಹಾಗೂ ಎಂಆರ್‌ಸಿಯ ಅಧ್ಯಕ್ಷ ರಾಹುಲ್ ಕೋನಾಪುರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News