ಸಹಕಾರಿ ಕ್ಷೇತ್ರದ ಅಧ್ಯಯನ ನಡೆಸಿ ಕೈಪಿಡಿ ಪ್ರಕಟ: ಡಾ.ಎಂ.ಎನ್. ರಾಜೇಂದ್ರ ಕುಮಾರ್

Update: 2018-11-14 16:26 GMT

ಮಂಗಳೂರು, ನ.14: ದ.ಕ.ಜಿಲ್ಲೆಯು ಸಹಕಾರಿ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿ ರಾಷ್ಟ್ರಕ್ಕೆ ಮಾದರಿಯಾಗಿದೆ. ಜಿಲ್ಲೆಯ ಆರ್ಥಿಕ ಸ್ಥಿತಿಗತಿ, ಸಹಕಾರಿ ಕ್ಷೇತ್ರದ ಹುಟ್ಟು, ಬೆಳವಣಿಗೆ, ಸಾಧನೆಗಳ ಬಗ್ಗೆ ಅಧ್ಯಯನ ನಡೆಸಿ ಕೈಪಿಡಿ ರಚಿಸುವ ಯೋಜನೆಯಿದೆ. ಮುಂದಿನ ವರ್ಷ ಸಹಕಾರಿ ಸಪ್ತಾಹ ಒಳಗಾಗಿ ಈ ಕೈಪಿಡಿ ಬಿಡುಗಡೆಗೊಳ್ಳಲಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮತ್ತು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ವತಿಯಿಂದ ಕುಲಶೇಖರ ಡೇರಿ ಆವರಣದಲ್ಲಿ ಬುಧವಾರ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಪ್ತಾಹದ ಮೊದಲ ದಿನದ ವಿಷಯವಾದ ‘ಸಹಕಾರಿ ಮಾರಾಟ, ಸಂಸ್ಕರಣೆ ಮತ್ತು ಶೇಖರಣೆ’ಯು ಸಹಕಾರಿ ಹಾಲು ಒಕ್ಕೂಟಕ್ಕೆ ಅನ್ವಯಿಸು ತ್ತದೆ. ಒಕ್ಕೂಟವು ಪ್ರತಿ ವರ್ಷ ಸಹಕಾರ ಸಪ್ತಾಹ ಸಂದರ್ಭ ಹೊಸ ಉತ್ಪನ್ನ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಎಂದರು.

ಸುವಾಸಿತ ಹಾಲಿನ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಅವಿಭಕ್ತ ಕುಟುಂಬ ಪದ್ಧತಿ ಮೂಲಕ ಸಹಕಾರಿ ತತ್ವದ ಕಲ್ಪನೆಯನ್ನು ಭಾರತ ಜಗತ್ತಿಗೆ ನೀಡಿದೆ. 58 ವಿಧದ ಸಹಕಾರಿ ಸಂಸ್ಥೆಗಳ ಮೂಲಕ ಸಹಕಾರ ಕ್ಷೇತ್ರ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಸರಕಾರಿ ವ್ಯವಸ್ಥೆಯಲ್ಲಿ ಎಲ್ಲ ಸೌಲಭ್ಯ ಪಡೆಯಲು ಮೀಸಲಾತಿ,ಜಾತಿಯ ಪ್ರಶ್ನೆ ಬರುತ್ತದೆ. ಆದರೆ ಹಾಲು ಒಕ್ಕೂಟದಲ್ಲಿ ಅಂತಹ ಯಾವುದೇ ಪ್ರಶ್ನೆ ಇಲ್ಲ. ಎಲ್ಲಾ ವರ್ಗದ ರೈತರಿಂದ ಹಾಲು ಸಂಗ್ರಹಿಸಿ ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ. ಆ ಮೂಲಕ ಸಹಕಾರ ತತ್ವಕ್ಕೆ ಶ್ರೇಷ್ಠ ಮಾದರಿಯಾಗಿದೆ ಎಂದರು.
ಮೇಯರ್ ಭಾಸ್ಕರ ಕೆ. ಮಾತನಾಡಿ, ದ.ಕ. ಸಹಕಾರಿ ಹಾಲು ಒಕ್ಕೂಟವು ಗ್ರಾಹಕರ ಸಂಸ್ಥೆಯಾಗಿ ಬೆಳೆದಿದೆ. ಕುಲಶೇಖರದ ಡೇರಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಮನಪಾದಿಂದ 1 ಕೋ.ರೂ. ಬಿಡುಗಡೆ ಮಾಡಲಾಗುತ್ತಿದೆ. ರಸ್ತೆ ವಿಸ್ತರಣೆಗೆ 35 ಲಕ್ಷ ರೂ. ಮೀಸಲಿಡಲಾಗಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು ಸುವಾಸಿತ ಹಾಲಿನ ಸ್ಥಾವರ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಸಹಕಾರ ಇಲಾಖೆ ಅಧಿಕಾರಿ ಮಂಜುನಾಥ್ ಅತಿಥಿಗಳಾಗಿದ್ದರು.

ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ಸ್ವಾಗತಿಸಿದರು. ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಡಾ.ಕೆ.ಎಂ. ಕೃಷ್ಣ ಭಟ್ ಕೊಂಕೋಡಿ, ಪದ್ಮನಾಭ ಶೆಟ್ಟಿ ಅರ್ಕಜೆ, ಹದ್ದೂರು ರಾಜೀವ ಶೆಟ್ಟಿ, ವೀಣಾ ಆರ್. ರೈಘಿ, ಜಾನಕಿ ಹಂದೆ, ಟಿ. ಸೂರ್ಯ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ನವೀನ್‌ಚಂದ್ರ ಜೈನ್, ನರಹರಿ ಪ್ರಭು, ಉದಯ ಎಸ್. ಕೋಟ್ಯಾನ್, ಮಾರುಕಟ್ಟೆ ವಿಭಾಗ ವ್ಯವಸ್ಥಾಪಕ ಜಯದೇವಪ್ಪ ಕೆ. ಉಪಸ್ಥಿತರಿದ್ದರು.

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ನೂತನ ಉತ್ಪನ್ನವಾದ ನಂದಿನಿ ಜೀರಾ ಮಜ್ಜಿಗೆ ಮತ್ತು ಐದು ಸ್ವಾದಗಳ ರುಚಿಕರ ನಂದಿನಿ ಸುವಾಸಿತ ಹಾಲನ್ನು ಸಿಪಿಪಿ ಬಾಟಲ್‌ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿು.

ನಂದಿನಿ ಜೀರಾ ಮಜ್ಜಿಗೆ (250 ಮಿ.ಲೀ. ಸ್ಯಾಚೆಟ್) ಜೀರ್ಣಶಕ್ತಿ ವೃದ್ಧಿಸಲು, ದಣಿವಾರಿಸಿ ದೇಹ ತಂಪಾಗಿರಿಸಲು ಅತ್ಯುತ್ತಮ ಪೇಯವಾಗಿದೆ. ರೈತರಿಂದ ಸಂಗ್ರಹಿಸಿ ಶುದ್ಧ, ತಾಜಾ ಹಾಲಿನಿಂದ ಆಧುನಿಕ ತಂತ್ರಜ್ಞಾನ, ಪಾರಂಪರಿಕ ಪದ್ದತಿಯಲ್ಲಿ ತಯಾರಿಸಿದ ಮಜ್ಜಿಗೆಯನ್ನು ಎಲ್ಲರೂ ಸೇವಿಸಬಹುದು. ಸುವಾಸಿತ ಹಾಲು (200 ಮಿ,ಲೀ. ಸಿಪಿಟಿ ಬಾಟಲ್)ಬಾದಾಮ್, ಪಿಸ್ತಾ, ಮಾವು, ರೋಸ್, ಚಾಕಲೇಟ್ ಸ್ವಾದದಲ್ಲಿ ಲಭ್ಯವಿದೆ.

ಬುಧವಾರ ಸಿಪಿಪಿ ಬಾಟಲ್‌ಗಳಲ್ಲಿ ಬಿಡುಗಡೆಗೊಂಡ ನಂದಿನಿ ಸುವಾಸಿತ ಹಾಲು ನ.15ರಂದು ಆಯ್ದ ಡೀಲರ್‌ಗಳಲ್ಲಿ ದಾಸ್ತಾನು ಮುಗಿಯುವವರಿಗೆ ಉಚಿತವಾಗಿ ದೊರೆಯಲಿದೆ. ನ.16ರಂದು 15 ಸಾವಿರ ಪ್ಯಾಕೆಟ್ ನಂದಿನಿ ಜೀರಾ ಮಜ್ಜಿಗೆಯನ್ನು ಉಚಿತವಾಗಿ ನೀಡಲಾಗುವುದು. ಹೊಸ ಉತ್ಪನ್ನ ಬಗ್ಗೆ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯಲು ಮೊದಲ ದಿನ ಉಚಿತವಾಗಿ ನೀಡಲಾಗುತ್ತಿದೆ ಎಂದು ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News