ಬಂಟ್ವಾಳ ಯೋಜನಾ ಕಚೇರಿ, ಜಿಲ್ಲಾ ಮಟ್ಟದ ಕಚೇರಿ ನಿರ್ಮಾಣ ಕಾಮಗಾರಿಗಳಿಗೆ ಶಂಕು ಸ್ಥಾಪನೆ

Update: 2018-11-14 16:29 GMT

ಬಂಟ್ವಾಳ, ನ. 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿ ಮತ್ತು ಜಿಲ್ಲಾ ಮಟ್ಟದ ಕಚೇರಿ ನಿರ್ಮಾಣ ಕಾಮಗಾರಿಗಳಿಗೆ  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ ನಡೆದ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಬಡಜನರು ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇದೀಗ ಕೇಂದ್ರ ಸರಕಾರದ ಸ್ಕಿಲ್ ಇಂಡಿಯಾ ಯೋಜನೆಯಲ್ಲಿ ಕೃಷಿ ಚಟುವಟಿಕೆಗೂ ಆದ್ಯತೆ ನೀಡಲಾಗಿದ್ದು, ಇಂದು ಹಳ್ಳಿಗಳಿಂದ ಮಕ್ಕಳು ನಗರದತ್ತ ವಲಸೆ ಹೋಗದಂತೆ ತಡೆಯುವುದು ನಮ್ಮ ಮುಖ್ಯ ಕರ್ತವ್ಯವಾಗಬೇಕು. ಮಕ್ಕಳು ವಿದ್ಯಾವಂತ ಕೃಷಿಕರಾದರೆ ಇಲ್ಲಿಯ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಡಾ. ಡಿ.ವಿರೇಂದ್ರ ಹೆಗ್ಗಡೆಯವರ ಮನೆ ಮತ್ತು ಬಾಲ್ಯ ಕಳೆದ ಮನೆ ಇಲ್ಲಿದೆ. ಬಂಟ್ವಾಳಕ್ಕೆ ಡಾ. ಹೆಗ್ಗಡೆಯವರ ನಿಕಟ ಸಂಬಂಧವಿರುವುದು ಈ ಪ್ರದೇಶದಲ್ಲಿ ಜಿಲ್ಲಾ ಕಚೇರಿಯೊಂದು ನಿರ್ಮಾಣವಾಗುವುದಕ್ಕೆ ಸಾಕ್ಷಿ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ ಮಾತನಾಡಿ, 13800 ಚ.ಅಡಿ, ಮೂರು ಮಹಡಿಯ ಈ ಕಟ್ಟಡವು ದ.ಕ. ಜಿಲ್ಲಾ ಕಚೇರಿಯಾಗಿ ರೂಪುಗೊಳ್ಳಲಿದೆ. ಯೋಜನೆಗೆ ಬಂಟ್ವಾಳ ತಾಲೂಕು ಅತಿ ಹೆಚ್ಚಿನ ಬೆಂಬಲ ನೀಡಿದ್ದು, 1500 ಕೋಟಿ ರೂ ಸಾಲ 14 ವರ್ಷಗಳಲ್ಲಿ ವಿತರಣೆ ಆಗಿದೆ ಎಂದರು.

ಈ ಸಂದರ್ಭ ತುಳು ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಸಿ.ಭಂಡಾರಿ, ಜಿಪಂ ಸದಸ್ಯ ಬಿ.ಪದ್ಮಶೇಖರ ಜೈನ್,  ಜನಜಾಗೃತಿ ವೇದಿಕೆಯ ಪ್ರಮುಖರಾದ ಪ್ರಕಾಶ ಕಾರಂತ, ರೊನಾಲ್ಡ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪ್ರಮುಖರಾದ ಕೈಯೂರು ನಾರಾಯಣ ಭಟ್, ಸದಾನಂದ ನಾವರ, ಪುರಸಭೆ ಮಾಜಿ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಸೇವಾಂಜಲಿಯ ಕೃಷ್ಣಕುಮಾರ್ ಪೂಂಜ, ಸಹಕಾರಿ ಜಿ.ಆನಂದ, ಬೇಬಿ ಕುಂದರ್, ಬಾಲಕೃಷ್ಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಶಾಸಕರನ್ನು ಸನ್ಮಾನಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ, ಯೋಜನಾಧಿಕಾರಿ ಜಯಾನಂದ ಪಿ, ಮೇಲ್ವಿಚಾರಕರಾದ ಶಶಿಧರ್, ರಮೇಶ್ ಎನ್, ಚಂದ್ರಶೇಖರ್ ಉಪಸ್ಥಿತರಿದ್ದು, ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News