ನ.16ರಿಂದ ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ 'ಮಾನವಕುಲದ ಮಾರ್ಗದರ್ಶಕ' ಅಭಿಯಾನ

Update: 2018-11-14 16:36 GMT

ಭಟ್ಕಳ, ನ. 14: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕವು ನ.16ರಿಂದ 30ರ ವರೆಗೆ  "ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ" ಎಂಬ ವಿಷಯದಲ್ಲಿ ರಾಜ್ಯವ್ಯಾಪಿ ಅಭಿಯಾನವನ್ನು ಆಯೋಜಿಸಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು

ಅಭಿಯಾನದ ದ್ಯೇಯೋದ್ದೇಶಗಳ ಕುರಿತಂತೆ ಮಾತನಾಡಿದ ಅವರು, ಸಮಾಜದಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ಪೂರ್ವಾಗ್ರಹಗಳನ್ನು ಹೋಗಲಾಡಿಸಿ, ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯನ್ನು ಬೆಳೆಸುವುದೇ ಈ ಅಭಿಯಾನದ ಉದ್ದೇ±ವಾಗಿದ್ದು. ಪರಸ್ಪರರನ್ನು ಅರಿಯುವ ಹೃದಯಗಳನ್ನು ಬೆಸೆಯುವ ಈ ಮಹತ್ಕಾರ್ಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನಾಡಿನ ಜನತೆಯ ಸಹಕಾರವನ್ನು ಕೋರುತ್ತದೆ ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಜಿಲ್ಲಾ ಸಂಚಾಲಕ ಎಂ.ಆರ್.ಮಾನ್ವಿ, ಪ್ರವಾದಿ ಮುಹಮ್ಮದ್(ಸ)ರ ಜೀವನ ಮತ್ತು ಸಂದೇಶ ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾದುದು. ಅವರ ಜೀವನ ಮತ್ತು ಸಾಧನೆಗಳು ಎಲ್ಲಾ ಧರ್ಮಗಳ ಜ್ಞಾನಿಗಳ ಮೆಚ್ಚುಗೆಯನ್ನು, ಜಗತ್ತಿನಾದ್ಯಂತ  ಜನ ಮನ್ನಣೆ ಗಳಿಸಿರುತ್ತದೆ. ಅವರ ಮೇಲೆ ಅವತೀರ್ಣಗೊಂಡ  ಪವಿತ್ರ ಕುರ್ ಆನ್ ಮತ್ತು ಅವರ ಬೋಧನೆಗಳಾದ "ಹದೀಸ್"ಗಳು ಅಧಿಕೃತವಾಗಿ ಸಂರಕ್ಷಿಸಲ್ಪಟ್ಟಿದ್ದು ಇಂದಿಗೂ ಅವು ಪ್ರಸ್ತುತವಾಗಿವೆ ಈ ಮಹಾನ್ ವ್ಯಕ್ತಿತ್ವದ ಸಂದೇಶ ಮತ್ತು ಬೋಧನೆಗಳನ್ನು ಸರ್ವಮಾನವ ಕುಲಕ್ಕೆ ಪ್ರಸ್ತುತ ವೆಂಬುದನ್ನು ಸಾರ್ವಜನಿಕರಿಗೆ ಪರಿಚಯಿಸುವ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಅಭಿಯಾನದ ಭಟ್ಕಳ ತಾಲೂಕು ಸಂಚಾಲಕ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಮಾತನಾಡಿ, ಪ್ರವಾದಿ ಮುಹಮ್ಮದರ ಬಗ್ಗೆ ಜಗತ್ತಿನ ಪ್ರಸಿದ್ಧ ದಾರ್ಶನಿಕರು ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರವಾದಿ ಮುಹಮ್ಮದ್ ಕುರಿತಂತೆ ಅಧಿಕೃತವಾಗಿ ಆಯಾ ಧರ್ಮದ ವಕ್ತಾರರಿಂದಲೇ ಅರಿತುಕೊಳ್ಳಬೇಕು ಎಂದರು. ಭಟ್ಕಳ ತಾಲೂಕಿನಾದ್ಯಂತ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು  ವಿಚಾರಗೋಷ್ಠಿ, ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಕಾಲೇಜ್ ಉಪನ್ಯಾಸ, ಮನೆಮನೆ ಭೇಟಿ, ಕಾರ್ನರ್ ಮೀಟಿಂಗ್ ಮತ್ತಿತರರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಇಸ್ಲಾಮಿಕ್ ವೆಲ್ಫೇರ್ ಸೂಸೈಟಿಯ ಚೇರ್ಮನ್ ಕಾದಿರ್ ಮೀರಾಪಟೇಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News