ರಾಜಸ್ತಾನ ವಿಧಾನಸಭೆಗೆ ಸ್ಪರ್ಧಿಸಲಿರುವ ಗೆಹ್ಲೋಟ್, ಪೈಲಟ್

Update: 2018-11-14 17:06 GMT

ಜೈಪುರ, ನ.14: ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಕಾಂಗ್ರೆಸ್ ರಾಜ್ಯ ಘಟಕಾಧ್ಯಕ್ಷ ಸಚಿನ್ ಪೈಲಟ್ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ತಿಳಿಸಿ, ಈ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಹೊಸದಿಲ್ಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೆಹ್ಲೋಟ್, “ನಾನು ಹಾಗೂ ಸಚಿನ್ ಪೈಲಟ್ ಮುಂಬರುವ ರಾಜಸ್ತಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಪೈಲಟ್, ರಾಹುಲ್‌ ಜಿ ಅವರ ಆದೇಶ ಹಾಗೂ ಗೆಹ್ಲೋಟ್ ಅವರ ಕೋರಿಕೆ ಹಿನ್ನೆಲೆಯಲ್ಲಿ ತಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ” ಎಂದರು. ಈ ಇಬ್ಬರು ಮುಖಂಡರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಎಂಬ ಕುರಿತು ರಾಜಸ್ತಾನ ಕಾಂಗ್ರೆಸ್‌ನ ಎರಡು ಬಣಗಳ ಮಧ್ಯೆ ಒಮ್ಮತ ಮೂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

 ದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ದೌಸ ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ಮುಖಂಡ ಹರೀಶ್ ಮೀನ ಕಾಂಗ್ರೆಸ್ ಸೇರ್ಪಡೆಗೊಂಡರು. ಡಿ.7ರಂದು ರಾಜಸ್ತಾನ ವಿಧಾನಸಭಾ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News