ಮಂಗಳೂರು: ಆರೆಸ್ಸೆಸ್ ಬೈಠಕ್‌ನಲ್ಲಿ ಪಾಲ್ಗೊಂಡ ಅಮಿತ್ ಶಾ

Update: 2018-11-14 17:13 GMT

ಮಂಗಳೂರು, ನ.14: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರು ವಿಮಾನ ನಿಲ್ದಾಣ ಮೂಲಕ ರಾತ್ರಿ 8:30ಕ್ಕೆ ಆಗಮಿಸಿ, ನೇರವಾಗಿ ನಗರದ ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ನಡೆದ ಆರೆಸ್ಸೆಸ್‌ನ ದಕ್ಷಿಣ ಭಾರತದ ಬೈಠಕ್‌ನಲ್ಲಿ ಪಾಲ್ಗೊಂಡರು.

ಅಮಿತ್ ಶಾ ಅವರ ಜತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಾಮಲಾಲ್ ಭಾಗಿ ಸಹಿತ ಹಲವು ಪ್ರಮುಖ ನಾಯಕರು ಆಗಮಿಸಿದ್ದಾರೆ. ಅಮಿತ್ ಶಾ ಅವರನ್ನು ಬಿಜೆಪಿ ಸಂಸದರು, ಶಾಸಕರು ಹಾಗೂ ಪಕ್ಷದ ಜಿಲ್ಲಾ ನಾಯಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಆರೆಸ್ಸೆಸ್ ಸಂಘಟನೆ ಕಾರ್ಯಯೋಜನೆಗಳ ಬಗ್ಗೆ ಚರ್ಚೆಗೆ ಪ್ರಮುಖವಾಗಿರುವ ಈ ಬೈಠಕ್ ಈಗ ದೇಶದಲ್ಲಿ ಎರಡು ಕಡೆ ಆಯೋಜನೆಗೊಂಡು ನಡೆಯುತ್ತಿದೆ. ಉತ್ತರ ಭಾರತದ ಬೈಠಕ್ ವಾರಾಣಸಿಯಲ್ಲಿ ಹಾಗೂ ದಕ್ಷಿಣ ಭಾರತದ ಬೈಠಕ್ ಮಂಗಳೂರಿನಲ್ಲಿ ನಡೆಯುತ್ತಿದೆ.

ಮಂಗಳೂರಿನಲ್ಲಿ ನ.10ರಿಂದ ದಕ್ಷಿಣ ಭಾರತದ ಬೈಠಕ್ ಆರಂಭಗೊಂಡಿದ್ದು, ನ.15ರವರೆಗೆ ನಡೆಯುತ್ತದೆ. ಇದರಲ್ಲಿ ಆರೆಸ್ಸೆಸ್ ಕಾರ್ಯವಾಹ ಭಯ್ನೆಜಿ (ಸುರೇಶ್ ಜೋಶಿ) ಸಹಿತ ಪ್ರಮುಖ ನಾಯಕರು ಭಾಗವಹಿಸುತ್ತಿದ್ದಾರೆ. ಆರೆಸ್ಸೆಸ್ ರಾಷ್ಟ್ರ ಮಟ್ಟದ ಬೈಠಕ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಭಾಗ ವಹಿಸುವುದು ಶಿಷ್ಟಾಚಾರ ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News