ಅಕ್ರಮ ಜಾನುವಾರು ಸಾಗಾಟ ಆರೋಪ: ಮೂರು ಮಂದಿ ಸೆರೆ

Update: 2018-11-14 17:27 GMT

ಉಪ್ಪಿನಂಗಡಿ, ನ. 14: ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಇವರಿಂದ ಆರು ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ ಗೂಡ್ಸ್ ಟೆಂಪೊವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕಾಸರಗೋಡು ತಾಲೂಕು ಬದಿಯಡ್ಕದ ಕನ್ನಂಗಾರು ನಿವಾಸಿ ವಿನಯಕುಮಾರ್ (38), ಕಣ್ಣೂರು ಜಿಲ್ಲೆಯ ತಲ್ಲೇರಿವೆಲ್ ತಾಲೂಕಿನ ಕಾಂಜಿರಾಟ ನಿವಾಸಿ ಸುನಿಲ್ ಕುಮಾರ್ (45), ಕಾಸರಗೋಡು ತಾಲೂಕಿನ ಚೆಂಗಳ ಗ್ರಾ.ಪಂ. ವ್ಯಾಪ್ತಿಯ ಚೂರಿಪಳ್ಳ ನಿವಾಸಿ ಸುರೇಶ್ ಸಿ.ಎಚ್. (38) ಬಂಧಿತ ಆರೋಪಿಗಳು.

ಕೇರಳದ ಕಸಾಯಿಖಾನೆಗೆ ಜಾನುವಾರ ಸಾಗಾಟ ಮಾಡಲಾಗುತ್ತಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಎಸ್.ಐ. ನಂದಕಮಾರ್ ಮತ್ತು ಸಿಬ್ಬಂದಿಗಳು ಪೆರ್ನೆಯ ಕಡಂಬು ಎಂಬಲ್ಲಿ ಕಾದು ನಿಂತು ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿ, ಆರೋಪಿಗಳು ಸಹಿತ ಜಾನುವಾರು ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಗೂಡ್ಸ್ ಟೆಂಪೋದಲ್ಲಿ 5 ದನ ಮತ್ತು 1 ಕರುವನ್ನು ಸಾಗಾಟ ಮಾಡಲಾಗುತ್ತಿತ್ತು. 

ಎಸ್ಕಾರ್ಟ್ ಬರುತ್ತಿದ್ದ ಬೈಕ್ ವಶಕ್ಕೆ: ಜಾನುವಾರು ಸಾಗಾಟದ ಟೆಂಪೋಗೆ ಬೆಂಗಾವಲಾಗಿ ಹಿಂಬಾಲಿಸಿಕೊಂಡು ಬರುತ್ತಿದ್ದ ಕೇರಳ ನೋಂದಣಿಯ ಬೈಕ್‍ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ವಶಕ್ಕೆ ತೆಗೆದುಕೊಂಡ 6 ಜಾನುವಾರುಗಳ ಮೌಲ್ಯ 80 ಸಾವಿರ, ಗೂಡ್ಸ್ ಟೆಂಪೋ ವಾಹನದ ಮೌಲ್ಯ 1 ಲಕ್ಷದ 50 ಸಾವಿರ, ಮೋಟಾರ್ ಸೈಕಲ್ ಮೌಲ್ಯ 25 ಸಾವಿರ ಸೇರಿದಂತೆ ಒಟ್ಟು ಅಂದಾಜು 2 ಲಕ್ಷದ 55 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಎಸ್.ಐ. ನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ದೇವದಾಸ್, ಸಂಗಯ್ಯಕಾಳೆ, ಹರೀಶ್ಚಂದ್ರ, ಗಣೇಶ್, ಶ್ರೀಧರ, ಮನೋಹರ, ಸಚಿನ್, ನಾರಾಯಣ ಗೌಡ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News