ಮಂಗಳೂರು: ಎಂಡೋಪೀಡಿತ ಪ್ರದೇಶದಲ್ಲಿ ನೀರಿನ ಮಾದರಿ ಸಂಗ್ರಹಕ್ಕೆ ಸಮಿತಿ ನಿರ್ಧಾರ

Update: 2018-11-14 17:40 GMT

ಮಂಗಳೂರು, ನ.14: ಎಂಡೋಸಲ್ಫಾನ್ ಪೀಡಿತ ಪ್ರದೇಶದಲ್ಲಿ ಜಿಲ್ಲಾಡಳಿತ ಹಾಗೂ ಎಂಡೋಸಲ್ಫಾನ್ ಪೀಡಿತ ರಕ್ಷಣಾ ಸಂಘಟನೆಗಳ ಜಂಟಿ ಸಮಿತಿಯೊಂದಿಗೆ ನೀರಿನ ಮಾದರಿ ಪರೀಕ್ಷೆ ಮಾಡಲು ಕರ್ನಾಟಕ ವಿಧಾನ ಪರಿಷತ್‌ನ ಸರಕಾರಿ ಭರವಸೆಗಳ ಸಮಿತಿ ನಿರ್ಧರಿಸಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಹಾಗೂ ಮೃತಪಟ್ಟ ಎಂಡೋಸಲ್ಫಾನ್ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತ ಕರ್ನಾಟಕ ವಿಧಾನ ಪರಿಷತ್‌ನ ಸರಕಾರಿ ಭರವಸೆಗಳ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಕೆ.ಸಿ. ಕೊಂಡಯ್ಯ, ಎಂಡೋಸಲ್ಫಾನ್ ಪೀಡಿತ 92 ಗ್ರಾಮಗಳ ವ್ಯಾಪ್ತಿಯಲ್ಲಿನ ತೆರೆದ ನೀರು ಹಾಗೂ ಬೋರ್‌ವೆಲ್‌ಗಳಲ್ಲಿನ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಬೇಕು ಸೂಚಿಸಿದರು.

ಸರಕಾರಿ ಭರವಸೆಗಳ ಸಮಿತಿಯ ತಂಡ ಬುಧವಾರ ಎಂಡೋಸಲ್ಫಾನ್ ಪ್ರದೇಶಗಳಾದ ಪುತ್ತೂರು, ಬೆಳ್ತಂಗಡಿ, ಕೊಕ್ಕಡ ಡೇ ಕೇರ್ ಸೆಂಟರ್‌ಗಳು ಹಾಗೂ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಡೊಸಲ್ಫಾನ್ ಪೀಡಿತರನ್ನು ಭೇಟಿ ಮಾಡಿತು. ಎಂಡೋಪೀಡಿತ ಸಂತ್ರಸ್ತರು ನರಳಾಟ ತೀರಾ ಮನಸಿಗೆ ವಿಚಲಿತವಾಗಿದೆ ಎಂದರು.

ಡೇ ಕೇರ್‌ಗಳಲ್ಲಿ ಎಂಡೋಪೀಡಿತ ಸಂತ್ರಸ್ತ ವಯಸ್ಕ ಯುವಕ- ಯುವತಿಯರಿಗೆ ಫಿಜಿಯೊಥೆರಫಿ, ತರಬೇತಿ ನೀಡಲಾಗುತ್ತಿದೆ. ಇದಕ್ಕೆ ಹಲವು ಸಂಘಟನೆ ಗಳು, ಶಿಕ್ಷಕರು ಒಳ್ಳೆಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಸೇವೆ ನೀಡುತ್ತಿದ್ದಾರೆ. ಕೆಲವು ಕೇಸುಗಳು ಹದಗೆಟ್ಟಿದ್ದು, 29 ವರ್ಷದ ಸಂತೋಷ ಎಂಬ ಯುವಕನಿಗೆ ಪುನರಾವಸ್ಥೆಯಾಗಬೇಕು.ಇನ್ನು ನಾಲ್ಕೈದು ಡೇ ಕೇರ್ ಸೆಂಟರ್‌ಗಳು ಪ್ರಾರಂಭವಾಗಲಿವೆ ಎಂದರು.

ಸಂತ್ರಸ್ತ ಕುಟುಂಬಗಳು ಸೊಸೈಟಿಗಳನ್ನು ಕಟ್ಟಿಕೊಂಡಿರುವ ಬಗ್ಗೆ ಸಭೆಯಲ್ಲಿ ಕೇಳಿಬಂದಿದ್ದು, ಇಂತಹ ಸೇವೆ ಸ್ವಾಗತಾರ್ಹ ಕಾರ್ಯವಾಗಿದೆ. ಈ ಸೊಸೈಟಿ ಗಳಿಗೆ ಜಾಗ, ಕಟ್ಟಡಗಳನ್ನು ನಿರ್ಮಿಸಿ ಕೊಡುವ ಬಗ್ಗೆ ಸಮಿತಿಯು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಿದೆ. ಡೇ ಕೇರ್ ಸೆಂಟರ್‌ಗಳಲ್ಲಿ ತರಬೇತಿ, ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಜೊತೆಗೆ ಆಸಕ್ತ ಸಂತ್ರಸ್ತರಿಗೆ ಚಿತ್ರಕಲೆ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.

4000 ಸಂತ್ರಸ್ತರಿಗೆ ಪೋಷಕಾಂಶಯುಕ್ತ ಬೇಳೆ, ಎಣ್ಣೆ, ಮತ್ತಿತರ ಧಾನ್ಯ ಆಹಾರ ಪೂರೈಸಲಾಗುವುದು. ಈ ಬಗ್ಗೆ ಜಿಲ್ಲಾದ್ಯಂತ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ನೀಡುತ್ತಿರುವ ಪರಿಹಾರ ಧನವನ್ನು ಮಾನವೀಯ ನೆಲೆಯಲ್ಲಿ ಜಿಲ್ಲಾಧಿಕಾರಿ ಹೆಚ್ಚಳ ಮಾಡುವಂತೆ ಸಮಿತಿಗೆ ಒತ್ತಾಯಿಸಿದ್ದು, ಸರಕಾರದ ಮಟ್ಟದಲ್ಲಿ ಚರ್ಚಿಸಿ ಕೂಡಲೇ ಪರಿಹಾರ ಧನ ತಲುಪುವಂತೆ ಮಾಡಲಾಗುವುದು ಎಂದು ಹೇಳಿದರು.

ಎಂಡೋಪೀಡಿತರಿಗೆ ಚಿಕಿತ್ಸೆ ನೀಡಲು ಮೊಬೈಲ್ ಆ್ಯಂಬುಲೆನ್ಸ್‌ಗಳನ್ನು ಈಗಾಗಲೇ ಸರಕಾರ ಪೂರೈಕೆ ಮಾಡಿದ್ದು ಸೇವೆ ನೀಡುತ್ತಿವೆ. ಆದರೆ ಆ್ಯಂಬುಲೆನ್ಸ್‌ಗಳು ಸಮರ್ಪಕವಾಗಿ ಸೇವೆ ನೀಡುತ್ತಿಲ್ಲ. ಎತ್ತರದ ಪ್ರದೇಶಗಳಲ್ಲಿ ಈ ಆ್ಯಂಬುಲೆನ್ಸ್‌ಗಳು ಹತ್ತಲು ಸಮರ್ಥವಿಲ್ಲ ಎನ್ನುವುದು ಸಭೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಹೆಚ್ಚಿನ ಸಾಮರ್ಥ್ಯದ ಆ್ಯಂಬುಲೆನ್ಸ್‌ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕೇರಳ ಮಾದರಿಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ನೀಡಲು ಅಲ್ಲಿನ ಜಿಲ್ಲಾ ಮಟ್ಟದ ಆಡಳಿತದೊಂದಿಗೆ ಸಮಾಲೋಚನೆ ನಡೆಸಲಾಗುವುದು. ಈ ಬಗ್ಗೆ ರಾಜ್ಯ ಕಾರ್ಯದರ್ಶಿ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ನ ಸರಕಾರಿ ಭರವಸೆಗಳ ಸಮಿತಿಯ ಸದಸ್ಯರಾದ ಡಾ.ತೇಜಸ್ವಿನಿಗೌಡ, ಎಸ್.ರವಿ, ಕೆ.ಟಿ. ಶ್ರೀಕಂಠೇಗೌಡ, ಕೆ.ವಿ. ನಾರಾಯಣಸ್ವಾಮಿ, ಎಂ.ಎ. ಗೋಪಾಲಸ್ವಾಮಿ, ಕೆ.ಹರೀಶ್ ಕುಮಾರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಿಇಒ ಡಾ.ಸೆಲ್ವಮಣಿ, ಡಿಎಚ್ ಒ ಡಾ.ರಾಮಕೃಷ್ಣ ರಾವ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News